ಬೆಂಗಳೂರು : ಮರಾಠಿಗರ ಪುಂಡಾಟಿಕೆಗೆ ವಿರೋಧಿಸಿ ಇಂದು ಕರ್ನಾಟಕ ಬಂದ್ ನಡೆಸಲಾಗುತ್ತಿದ್ದು, ಇದಕ್ಕೆ ರಾಜ್ಯ ನೀರಸ ಪ್ರತಿಕ್ರಿಯೆ ನೀಡಿದೆ. ಇದರ ನಡುವೆಯೇ, ಅಹಿತಕರ ಘಟನೆ ನಡೆದರೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡುವುದರ ಮೂಲಕ ಗೃಹ ಸಚಿವ ಜಿ. ಪರಮೇಶ್ವರ್ ಪ್ರತಿಕ್ರಿಯಿಸಿದ್ದಾರೆ.
ಮಹಾರಾಷ್ಟ್ರೀಗರ ಕನ್ನಡ ವಿರೋಧಿ ನೀತಿ ಹಾಗೂ ಕನ್ನಡಿಗರ ಮೇಲೆ ನಡೆಯುತ್ತಿರುವ ದಬ್ಬಾಳಿಕೆಯನ್ನು ಖಂಡಿಸಿ, ಇಂದು ಅಖಂಡ ಕರ್ನಾಟಕ ಬಂದ್‌ಗೆ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಕರೆ ನೀಡಿದರು. ಅದರಂತೆ ಇಂದು ಬೆಳಗ್ಗೆ 6 ರಿಂದ ಸಂಜೆ 6ರ ವರೆಗೆ ಬಂದ್‌ಗೆ ಕರೆ ನೀಡಿದ್ದರು.
ಇದೀಗ ಈ ಬಗ್ಗೆ ಮಾತನಾಡಿದ ಗೃಹ ಸಚಿವ ಪರಮೇಶ್ವರ್, ಅಖಂಡ ಕರ್ನಾಟಕ ಬಂದ್‌ಗೆ ರಾಜ್ಯ ಸರ್ಕಾರ ಬೆಂಬಲ ಸೂಚಿಸಿಲ್ಲ, ಅಲ್ಲದೇ ಯಾವುದೇ ಅಹಿತಕರ ಘಟನೆಗೆ ಸರ್ಕಾರ ಆಸ್ಪದ ನೀಡಲ್ಲ.. ಬಂದ್ ಶಾಂತಿಯುತವಾಗಿ ನಡೆಯುತ್ತಿದ್ದು, ಮುಂದೆಯೂ ಹಾಗೆ ನಡೆಯಬೇಕು ಎಂದು ಎಚ್ಚರಿಕೆ ನೀಡಿದ್ದಾರೆ.
ಈ ಪ್ರತಿಭಟನಾಕಾರರು ಏನೇನೆಲ್ಲಾ ಮಾಡುತ್ತಿದ್ದಾರೆ ಎಂದು ಪೊಲೀಸರು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಅಹಿತಕರ ಘಟನೆ ನಡೆದರೆ ಕೂಡಲೇ ಬಂಧಿಸುತ್ತೇವೆ ಎಂದು ಗೃಹ ಸಚಿವ ತಿಳಿಸಿದ್ದಾರೆ.