ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದ ಗಂಡನನ್ನ ಸ್ನೇಹಿತರೊಟ್ಟಿಗೆ ಸೇರಿ ಪತ್ನಿಯೇ ಕೊಲೆ ಮಾಡಿದ ಘಟನೆ ಬೆಳಗಾವಿಯಲ್ಲಿ ನಡೆದಿದ್ದು, ಆರೋಪಿಗಳನ್ನ ಎಪಿಎಂಸಿ ಪೊಲೀಸರು ಬಂಧಿಸಿದ್ದಾರೆ.
ಬೆಳಗಾವಿ: ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದ ಗಂಡನನ್ನ ಸ್ನೇಹಿತರೊಟ್ಟಿಗೆ ಸೇರಿ ಮಾಡಿದ ಘಟನೆ ಬೆಳಗಾವಿಯಲ್ಲಿ ನಡೆದಿದ್ದು, ಇದೀಗ ನಾಲ್ವರು ಆರೋಪಿಗಳನ್ನ ಎಪಿಎಂಸಿ ಪೊಲೀಸರು ಬಂಧಿಸಿದ್ದಾರೆ. ಹೌದು ಬೆಳಗಾವಿ(Belagavi News)ಯ ಅಂಬೇಡ್ಕರ್ ನಗರದ ನಿವಾಸಿಯಾದ ಮೃತ ರಮೇಶ್ ಕಾಂಬಳೆ (38) ವೃತ್ತಿಯಲ್ಲಿ ಪೇಂಟರ್ ಆಗಿದ್ದು, ದಿಢೀರ್ ಮಾ.28ರಂದು ಬೆಳಗಾವಿಯಿಂದ ನಾಪತ್ತೆಯಾಗಿದ್ದ. ಈ ಕುರಿತು ಏ.5ರಂದು ಆತನ ಪತ್ನಿ ಸಂಧ್ಯಾ ಪೊಲೀಸ್ ಠಾಣೆಗೆ ದೂರು ನೀಡಿದ್ದಳು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದಾಗ ಸತ್ಯಾಂಶ ಬೆಳಕಿಗೆ ಬಂದಿದೆ.
ರಮೇಶ್ ಪತ್ನಿ ಜೊತೆ ಅನೈತಿಕ ಸಂಬಂಧ ಹೊಂದಿದ್ದ ಬಾಳು ಬಿರಂಜೆ
ಹೌದು ತನಿಖೆ ಶುರುಮಾಡಿದ ಪೊಲೀಸರಿಗೆ ತನ್ನ ಗಂಡ ಪರಸ್ತ್ರೀಯೊಂದಿಗೆ ಓಡಿ ಹೋಗಿದ್ದಾನೆಂದು ಪತ್ನಿ ಸಂಧ್ಯಾ ಕತೆ ಕಟ್ಟಿದ್ದಳು. ಬಳಿಕ ಈ ಘಟನೆ ಕುರಿತು ಪೊಲೀಸರಿಗೆ ಅನುಮಾನ ಬಂದು, ರಮೇಶ್ ಪತ್ನಿ ಸಂಧ್ಯಾ ಹಾಗೂ ರಮೇಶ್ ಸ್ನೇಹಿತರನ್ನ ವಿಚಾರಣೆ ನಡೆಸಿದ್ದಾರೆ. ಈ ವೇಳೆ ತಾವೇ ಕೊಲೆ ಮಾಡಿರುವುದಾಗಿ ರಮೇಶ್ ಪತ್ನಿ ಹಾಗೂ ಸ್ನೇಹಿತರು ಬಾಯ್ಬಿಟ್ಟಿದ್ದಾರೆ. ರಮೇಶ್ ಪತ್ನಿ ಸಂಧ್ಯಾ ಹಾಗೂ ಬಾಳು ಬಿರಂಜೆ ನಡುವೆ ಅನೈತಿಕ ಸಂಬಂಧವಿದ್ದು, ಪ್ರಿಯಕರ ಬಾಳು ಜತೆ ಸೇರಿಕೊಂಡು ಪತಿ ರಮೇಶ್ನನ್ನ ಕೊಲೆ ಮಾಡಿದ್ದೇನೆ ಎಂದು ತಪ್ಪನ್ನು ಒಪ್ಪಿಕೊಂಡಿದ್ದಾಳೆ.
ಕೊಲೆ ಮಾಡಿ ಶವವನ್ನ ಗೋವಾದ ಚೋರ್ಲಾ ಘಾಟ್ನಲ್ಲಿ ಎಸೆದಿದ್ದ ಆರೋಪಿಗಳು
ಇನ್ನು ಆರೋಪಿ ಪತ್ನಿ ತನ್ನ ಪ್ರಿಯಕರ ಹಾಗೂ ಆತನ ಸ್ನೇಹಿತರು ಜೊತೆಗೂಡಿ ಕೊಲೆ ಮಾಡಿ, ಗೋವಾದ ಚೋರ್ಲಾ ಘಾಟ್ನಲ್ಲಿ ಶವ ಎಸೆದಿರುವುದಾಗಿ ಒಪ್ಪಿಕೊಂಡಿದ್ದಾರೆ. ರಮೇಶ್ಗೆ ನಿದ್ರೆ ಮಾತ್ರೆಯನ್ನ ನೀಡಿ, ಬಳಿಕ ಕತ್ತು ಹಿಸುಕಿ ಕೊಲೆಗೈದಿದ್ದಾಗಿ ವಿಚಾರಣೆ ವೇಳೆ ಹೇಳಿದ್ದಾರೆ. ಈ ಕುರಿತು ಬೆಳಗಾವಿಯ ಎಪಿಎಂಸಿ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದು, ರಮೇಶ್ ಮೃತದೇಹ ಪತ್ತೆಗೆ ಮುಂದಾಗಿದ್ದಾರೆ.