ಬೆಂಗಳೂರು : ಬೆಳಗಾವಿಯಲ್ಲಿ ನಡೆದಿರುವುದು 60% ವಸೂಲಿ ಮಾಡಿದ ನೆನಪಿನ ಜಾತ್ರೆಯೇ ಹೊರತು ಕಾಂಗ್ರೆಸ್‌ ಸಮಾವೇಶವಲ್ಲ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಟೀಕಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳಗಾವಿಯಲ್ಲಿ ಮಹಾತ್ಮ ಗಾಂಧೀಜಿ ಹೆಸರಲ್ಲಿ ಕಾಂಗ್ರೆಸ್‌ ಸಮಾವೇಶ ಮಾಡಲಾಗಿದೆ. ಗಾಂಧೀಜಿ ಬಗ್ಗೆ ಅಷ್ಟೊಂದು ಪ್ರೀತಿ ಇದ್ದರೆ, ಕಾಂಗ್ರೆಸ್‌ ಭವನಕ್ಕೆ ಗಾಂಧೀಜಿ ಅಥವಾ ಸರ್ದಾರ್‌ ವಲ್ಲಭಭಾಯಿ ಪಟೇಲ್‌ ಹೆಸರಿಡಬೇಕಿತ್ತು. ಸೋನಿಯಾ ಗಾಂಧಿಯಾಗಲೀ, ರಾಹುಲ್‌ ಗಾಂಧಿಯಾಗಲೀ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಲಿಲ್ಲ. ಇವರಿಗೆ ಗಾಂಧೀಜಿಯ ಹೆಸರು ಹೇಳುವ ನೈತಿಕತೆ ಇಲ್ಲ. ಇದು 60% ವಸೂಲಿ ಮಾಡುವ ನೆನಪಿನ ಜಾತ್ರೆಯೇ ಹೊರತು ಸಮಾವೇಶವಲ್ಲ ಎಂದು ಹೇಳಿದರು.

ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಹದಗೆಟ್ಟಿದೆ. ಹಸುವಿನ ಕೆಚ್ಚಲು ಕತ್ತರಿಸಿದ್ದು, ಬ್ಯಾಂಕ್‌ ದರೋಡೆ, ಮಹಿಳೆ ಮೇಲೆ ಅತ್ಯಾಚಾರ ಮೊದಲಾದ ಘಟನೆಗಳನ್ನು ಕಡೆಗಣಿಸಿ ಸರ್ಕಾರ ಸಮಾವೇಶ ಮಾಡಿದೆ. ಅಭಿವೃದ್ಧಿ ಬಗ್ಗೆ ಕೇಳಿದರೆ ಬಿಜೆಪಿ ಸರ್ಕಾರದ ಅವಧಿಗೆ ಹೋಲಿಸುತ್ತಾರೆ ಎಂದರೆ ಕಾಂಗ್ರೆಸ್‌ ಹೇಗೆ ಭಿನ್ನವಾಗುತ್ತದೆ? ಕಾಂಗ್ರೆಸ್‌ ಶಾಸಕರು ಕೂಡ ಅನುದಾನ ಸಿಕ್ಕಿಲ್ಲ ಎಂದು ಹೇಳುತ್ತಿದ್ದಾರೆ. ಗಾಂಧೀಜಿಯಂತೆ ಸರಳವಾಗಿರಬೇಕು ಎಂದು ಹೇಳಿದ್ದಾರೆ. ಆದರೆ ಕಟೌಟ್‌ಗಳ ವಿಜೃಂಭಣೆ ಅಲ್ಲಿ ಕಂಡುಬಂದಿದೆ. ಇದು ನಕಲಿ ಗಾಂಧಿಗಳ ಸಮಾವೇಶ ಎಂದು ಕಿಡಿಕಾರಿದರು.

Leave a Reply

Your email address will not be published. Required fields are marked *