ರಾಜಧಾನಿಯಲ್ಲಿ ಕಳೆದ ಮೂರು ವರ್ಷ ಸಂಭವಿಸಿದ ಅಪಘಾತದಲ್ಲಿ ದಿನಕ್ಕೆ ಸರಾಸರಿ ಕನಿಷ್ಠ ಮೂವರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಬೆಂಗಳೂರು ಸಂಚಾರಿ ಇಲಾಖೆ ತಿಳಿಸಿದೆ. ನಗರ ಸಂಚಾರ ಪೊಲೀಸರು ಮೂರು ವರ್ಷಗಳಲ್ಲಿ ನಗರದಲ್ಲಿ ಸಂಭವಿಸಿರುವ ಅಪಘಾತಗಳು ಹಾಗೂ ಮೃತಪಟ್ಟವರ ಸಂಖ್ಯೆಯನ್ನು ವಿಶ್ಲೇಷಣೆ ಮಾಡಿದಾಗ ಆಘಾತಕಾರಿ ಅಂಶ ಬಹಿರಂಗಗೊಂಡಿದೆ.
ಬೆಂಗಳೂರು: ರಾಜಧಾನಿಯಲ್ಲಿ ಕಳೆದ ಮೂರು ವರ್ಷ ಸಂಭವಿಸಿದ ಅಪಘಾತದಲ್ಲಿ (Accident) ದಿನಕ್ಕೆ ಸರಾಸರಿ ಕನಿಷ್ಠ ಮೂವರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಬೆಂಗಳೂರು ಸಂಚಾರ ಇಲಾಖೆ (Bengaluru Traffic Department) ತಿಳಿಸಿದೆ. ನಗರ ಸಂಚಾರ ಪೊಲೀಸರು (Traffic Police) ಮೂರು ವರ್ಷಗಳಲ್ಲಿ ನಗರದಲ್ಲಿ ಸಂಭವಿಸಿರುವ ಅಪಘಾತಗಳು ಹಾಗೂ ಮೃತಪಟ್ಟವರ ಸಂಖ್ಯೆಯನ್ನು ವಿಶ್ಲೇಷಣೆ ಮಾಡಿದಾಗ ಆಘಾತಕಾರಿ ಅಂಶ ಬಹಿರಂಗಗೊಂಡಿದೆ. ಮಹಾನಗರದಲ್ಲಿ ಪ್ರತಿನಿತ್ಯ 2000 ವಾಹನಗಳು ಹೊಸದಾಗಿ ರಸ್ತೆಗೆ ಇಳಿಯುತ್ತಿವೆ. ವಾಹನ ಸವಾರರ ಅತಿವೇಗ, ನಿರ್ಲಕ್ಷ್ಯ ಚಾಲನೆಯಿಂದ ಅಪಘಾತಗಳು ಸಂಭವಿಸುತ್ತಿವೆ. ಕಳೆದ ಎರಡು ವರ್ಷಗಳಿಗೆ ಹೋಲಿಸಿದರೇ 2023ರಲ್ಲಿ ಭೀಕರ ಅಪಘಾತದಲ್ಲಿ ಸಾವನ್ನಪ್ಪಿರುವ ಸಂಖ್ಯೆ ಹೆಚ್ಚಳವಾಗಿದೆ.
2020 ರಲ್ಲಿ 632 ಭೀಕರ ಅಪಘಾತಗಳು ಸಂಭವಿಸಿದ್ದು, 657 ಜನ ಸಾವನ್ನಪ್ಪಿದ್ದಾರೆ. 2021 ರಲ್ಲಿ 618 ಅಪಘಾತಗಳು ಸಂಭವಿಸಿದ್ದು 651 ಜನ ಮೃತ ಪಟ್ಟಿದ್ದಾರೆ. 2022 ರಲ್ಲಿ 752 ಅಪಘಾತಗಳು ಸಂಭವಿಸಿದ್ದು, 772 ಜನ ಮೃತರಾಗಿದ್ದಾರೆ. 2021ರಕ್ಕಿಂತ 2022 ರಲ್ಲಿ 134 ಹೆಚ್ಚು ಅಪಘಾತ ಸಂಭವಿಸಿದ್ದು, ಇದರಲ್ಲಿ 121 ಜನ ಸಾವನ್ನಪ್ಪಿದ್ದಾರೆ.
2022 ರಲ್ಲಿ ಮೃತಪಟ್ಟ 772 ಜನರ ಪೈಕಿ ದ್ವಿಚಕ್ರ ವಾಹನ ಸವಾರರು 341, 247 ಪಾದಚಾರಿಗಳು, 90 ಹಿಂಬದಿ ಸವಾರರು ಸಾವನ್ನಪ್ಪಿದ್ದಾರೆ. ಇದರಲ್ಲಿ ಹೆಲ್ಮೆಟ್ ರಹಿತ ಚಾಲನೆಯಲ್ಲಿ 122 ಜನ, ಹೆಲ್ಮೆಟ್ ಧರಿಸಿದ 319 ಜನ ಮೃತರಾಗಿದ್ದಾರೆ. ಪ್ರತಿ ವರ್ಷ ಸರಾಸರಿ163 ಜನ ಸೆಲ್ಫ್ ಆಕ್ಸಿಡೆಂಟ್ಗೆ ಬಲಿಯಾಗಿದ್ದಾರೆ.
ಮೂರು ವರ್ಷಗಳಲ್ಲಿ 600 ಪುರುಷರು, 94 ಮಹಿಳೆಯರು ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಇವರಲ್ಲಿ 21 ರಿಂದ 40 ವಯಸ್ಸಿನ ಪುರುಷರು ಹಾಗೂ 31 ರಿಂದ 50 ಒಳಗಿನ ವಯಸ್ಸಿನ ಮಹಿಳೆಯರೇ ಹೆಚ್ಚಾಗಿ ಮೃತರಾಗಿದ್ದು, ದುರ್ದೈವದ ಸಂಗತಿ.
2022ರ ಕ್ಕಿಂತ 2020-21ರಲ್ಲಿ ಕಡಿಮೆ ಅಪಘಾತಗಳು ಸಂಭವಿಸಿದೆ. ಇದಕ್ಕೆ ಕಾರಣ ಕೊರೊನಾ ಹಿನ್ನಲೆ ಲಾಕ್ ಡೌನ್ನಿಂದ ಅಪಘಾತಗಳು ಇಳಿಮುಖವಾಗಿತ್ತು. ಕೋರೊನಾ ವೇಳೆ ರಸ್ತೆಯಲ್ಲಿ ವಾಹನಗಳ ಸಂಖ್ಯೆ ವಿರಳವಾಗಿತ್ತು. ವರ್ಕ್ ಫ್ರಂಮ್ ಹೋಮ್, ಶಾಲೆ-ಕಾಲೇಜುಗಳಿಲ್ಲದೆ ಕಾರಣ ಅಪಘಾತ ಸಂಖ್ಯೆಯಲ್ಲಿ ಇಳಿಮುಖವಾಗಿತ್ತು.
ಬೆಂಗಳೂರು ನಗರದಲ್ಲಿ ಅಪಘಾತದಲ್ಲಿ ಮೃತಪಟ್ಟವರು
2022 ರಲ್ಲಿ ಬೆಂಗಳೂರಿಗರ ಸಾವಿನ ಸಂಖ್ಯೆ- 464, ವಿವಿಧ ಜಿಲ್ಲೆಯವರು – 139, ಹೊರರಾಜ್ಯದವರು – 137, ವಿದೇಶಿಗರು – 4, ಅಪರಿಚಿತರು – 28 ಜನ ಸಾವನ್ನಪ್ಪಿದ್ದಾರೆ. 543 ಜನರು ತಲೆಗೆ ಗಾಯಗೊಂಡು ಮೃತರಾಗಿದ್ದಾರೆ. ರಸ್ತೆ ಗುಂಡಿಯಿಂದ 3 ಜನರು ನಿಧನರಾಗಿದ್ದಾರೆ.
ಸಿಮೆಂಟ್ ರಸ್ತೆಗಳಲ್ಲಿ 139, ಡಾಂಬರು ರಸ್ತೆಗಳಲ್ಲಿ 608, ಮಣ್ಣಿನ ರಸ್ತೆಗಳಲ್ಲಿ 5 ಅಪಘಾತಗಳು ಸಂಭವಿಸಿವೆ. ನೇರವಾದ ರಸ್ತೆಗಳಲ್ಲಿ ಅತಿವೇಗ ಚಾಲನೆಯಿಂದ 569, ತಿರುವು ರಸ್ತೆಗಳಲ್ಲಿ 37, ಟಿ ಜಂಕ್ಷನ್ಗಳಲ್ಲಿ 37, ನಾಲ್ಕು ರಸ್ತೆಗಳ ಜಂಕ್ಷನ್ಗಳಲ್ಲಿ 32, ರಸ್ತೆ ಹಂಪ್ಗಳಲ್ಲಿ 17 ಅಪಘಾತಗಳು ಸಂಭವಿಸಿವೆ.
2022 ರಲ್ಲಿ ನಿಗದಿತ ವಲ್ಲದ ಕಡೆ ರಸ್ತೆ ದಾಟುವಾಗ 108 ಪಾದಚಾರಿಗಳು, ನಿಗದಿತ ಸ್ಥಳದಲ್ಲಿ ರಸ್ತೆ ದಾಟುವಾಗ 44 ಜನರು, ರಸ್ತೆ ಬದಿ ನಡೆದುಕೊಂಡು ಹೋಗುವಾಗ 62 ಜನರು ವಾಹನಗಳಿಗೆ ಸಿಲುಕಿ ಸಾವನ್ನಪ್ಪಿದ್ದಾರೆ. 2020 ರಲ್ಲಿ 164 ಪಾದಚಾರಿಗಳು, 2021 ರಲ್ಲಿ 161 ಪಾದಾಚಾರಿಗಳು ಮೃತರಾಗಿದ್ದಾರೆ.