ಬಿಎಂಟಿಸಿ ಬಸ್ ಡಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ಯುವಕರಿಬ್ಬರು ದುರ್ಮರಣ ಹೊಂದಿರುವಂತಹ ಘಟನೆ ಲಗ್ಗೆರೆಯ ರಿಂಗ್ ರಸ್ತೆಯ ಕೆಂಪೇಗೌಡ ಆರ್ಚ್ ಬಳಿ ಅಪಘಾತ ನಡೆದಿದೆ.
ಪ್ರಾತಿನಿಧಿಕ ಚಿತ್ರ
ಬೆಂಗಳೂರು: ಬಿಎಂಟಿಸಿ ಬಸ್ ಡಿಕ್ಕಿ (collides) ಯಾಗಿ ರಸ್ತೆ ದಾಟುತ್ತಿದ್ದ ಯುವಕರಿಬ್ಬರು ದುರ್ಮರಣ ಹೊಂದಿರುವಂತಹ ಘಟನೆ ಲಗ್ಗೆರೆಯ ರಿಂಗ್ ರಸ್ತೆಯ ಕೆಂಪೇಗೌಡ ಆರ್ಚ್ ಬಳಿ ಅಪಘಾತ ನಡೆದಿದೆ. ಘಟನಾ ಸ್ಥಳಕ್ಕೆ ರಾಜಾಜಿನಗರ ಸಂಚಾರಿ ಪೊಲೀಸರ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಓರ್ವ ಯುವಕನನ್ನು ಸುರೇಶ್ ಎಂದು ಗುರುತಿಸಲಾಗಿದ್ದು, ಮತ್ತೊಬ್ಬ ಯುವಕನ ಗುರುತು ಪತ್ತೆ ಆಗಿಲ್ಲ.
ಮರದಿಂದ ಬಿದ್ದು ಕಾರ್ಮಿಕ ಸಾವು
ಮಡಿಕೇರಿ: ತಾಲೂಕಿನ ಇಬ್ಬನಿವಲವಾಡಿ ಗ್ರಾಮದ ಇಬ್ಬನಿ ರೆಸಾರ್ಟ್‌ನಲ್ಲಿ ಮರದ ಮೇಲಿಂದ ಆಕಸ್ಮಿಕವಾಗಿ ಕೆಳಗೆ ಬಿದ್ದು ಕೂಲಿ ಕಾರ್ಮಿಕ ಸಾವನ್ನಪ್ಪಿದ್ದಾರೆ. ಕಲಂದರ್(38) ಮೃತ ಕಾರ್ಮಿಕ. ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಚಲಿಸುತ್ತಿದ್ದ ರೈಲಿನಿಂದ ಬಿದ್ದು ಇಬ್ಬರು ಬೌದ್ಧ ಬಿಕ್ಕುಗಳು ಸಾವು
ನೆಲಮಂಗಲ: ಚಲಿಸುತ್ತಿದ್ದ ರೈಲಿನಿಂದ ಇಬ್ಬರು ಬೌದ್ಧ ಬಿಕ್ಕುಗಳು ಬಿದ್ದು ಸಾವನ್ನಪ್ಪಿರುವಂತಹ ಘಟನೆ ಬೆಂಗಳೂರು ಉತ್ತರ ತಾಲೂಕಿನ ಬೆತ್ತನಗೆರೆಯಲ್ಲಿ ನಡೆದಿದೆ. ರೈಲಿನ ಬಾಗಿಲಿನಲ್ಲಿ ಕುಳಿತಿದ್ದ ವೇಳೆ ಆಯತಪ್ಪಿ ಬಿದ್ದು ಮೃತಪಟ್ಟಿದ್ದಾರೆ ಎಂದು ಶಂಕೆ ವ್ಯಕ್ತವಾಗಿದೆ. ಟ್ರ್ಯಾಕ್ ಮ್ಯಾನ್‌ನಿಂದ ಬೌದ್ಧ ಬಿಕ್ಕುಗಳ ಸಾವು ಪ್ರಕರಣ ಬೆಳಕಿಗೆ ಬಂದಿದೆ. ಕುಶಾಲನಗರದಿಂದ ಬೆಂಗಳೂರಿಗೆ ಇಬ್ಬರು ಬಿಕ್ಕುಗಳು ಬರುತ್ತಿದ್ದರು. ಸುಮಾರು 25 ವರ್ಷ ಆಸುಪಾಸಿನವರು ಎನ್ನಲಾಗಿದೆ. ಕುಶಾಲನಗರದ ಗೋಲ್ಡನ್ ಟೆಂಪಲ್‌ಗೆ ಹೋಗಿ ಬರುತ್ತಿದ್ದರು ಎಂಬ ಮಾಹಿತಿ ಸಿಕ್ಕಿದೆ.
ಬಿಕ್ಕುಗಳ ಜೇಬಿನಲ್ಲಿ ಕುಶಾಲನಗರಕ್ಕೆ ಹೋಗಿರುವ ಬಸ್ ಟಿಕೆಟ್ ಪತ್ತೆ ಆಗಿದೆ. ಆದರೆ ಈವರೆಗೆ ಮೃತ ಇಬ್ಬರು ಬೌದ್ಧ ಬಿಕ್ಕುಗಳ ಗುರುತು ಪತ್ತೆಯಾಗಿಲ್ಲ. ಬೆಂಗಳೂರಿನ ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ಮೃತದೇಹಗಳನ್ನು ರವಾನಿಸಲಾಗಿದೆ. ಯಶವಂತಪುರ ರೈಲ್ವೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿಯಾಗಿ ಪಲ್ಟಿ: ಓರ್ವ ಸಾವು
ತುಮಕೂರು: ಜಿಲ್ಲೆಯ ಮಧುಗಿರಿ ತಾಲೂಕಿನ ತೆರಿಯೂರಿನ ಹೊರವಲಯದ ಅಣ್ಣನಹಳ್ಳಿ ಗೇಟ್ ಬಳಿ ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿಯಾಗಿ ಪಲ್ಟಿಯಾಗಿದ್ದು, ಕಾರು ಚಾಲಕ ಭರತ್ ಕುಮಾರ್(24) ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಕಾರಿನಲ್ಲಿದ್ದ ನಾಲ್ವರಿಗೆ ಗಾಯಗಳಾಗಿದ್ದು, ಮಧುಗಿರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಕುರಿತು ಕೊಡಿಗೇನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.