ಬೆಂಗಳೂರು: ಕಳೆದ ಎರಡು ತಿಂಗಳುಗಳಿಂದ ಕರ್ನಾಟಕದ ರಾಜ್ಯದಲ್ಲಿ ಆಡಳಿತ ಸಂಪೂರ್ಣವಾಗಿ ಕುಸಿದಿದೆ. ಸಿದ್ದರಾಮಯ್ಯನವರು ಯಾವುದೇ ಕ್ಷಣದಲ್ಲಿ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡಬಹುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ತಿಳಿಸಿದರು.
ದೆಹಲಿಯಲ್ಲಿ ಇಂದು ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, ಸಚಿವರಿಗೆ ವಿಶ್ವಾಸ ಇಲ್ಲ; ವಿಧಾನಸೌಧಕ್ಕೂ ಸಚಿವರು ಹೋಗುತ್ತಿಲ್ಲ. ಯಾವಾಗ ಮುಖ್ಯಮಂತ್ರಿ ರಾಜೀನಾಮೆ ಕೊಡುತ್ತಾರೋ, ಯಾವಾಗ ಸಿದ್ದರಾಮಯ್ಯರ ಪರವಾಗಿ ಬ್ಯಾಟಿಂಗ್ ಮಾಡಲು ದೆಹಲಿಗೆ ಹೋಗಬೇಕೋ ಎಂಬ ಆತಂಕ ಅವರಲ್ಲಿದೆ ಎಂದು ವಿಶ್ಲೇಷಿಸಿದರು.

ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ವೈಷ್ಣೋದೇವಿಗೆ ಹೋಗಿ ಬಂದಿದ್ದಾರೆ. ತಾಯಿಯಲ್ಲಿ ಆಶೀರ್ವಾದ ಬೇಡಿಕೊಂಡು ಬಂದಂತಿದೆ; ಅದು ಬೇರೆ ವಿಚಾರ ಎಂದು ನಗುತ್ತ ತಿಳಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಆಡಳಿತದ ಕ್ಷಣಗಣನೆ ಆರಂಭವಾಗಿದೆ. ಯಾವುದೇ ಕ್ಷಣದಲ್ಲಿ ರಾಜೀನಾಮೆ ಕೊಡಬಹುದು ಎಂದು ನುಡಿದರು.

ಬಿಜೆಪಿ-ಜೆಡಿಎಸ್ ಪಾದಯಾತ್ರೆಯಲ್ಲಿ ಸಾವಿರಾರು ಜನರು ಉತ್ಸಾಹದಿಂದ ಭಾಗವಹಿಸಿದ್ದರು. ಪಾಪ; ಕಾಂಗ್ರೆಸ್ಸಿಗರು ಗಾಬರಿಯಿಂದ ನಮ್ಮ ಪಾದಯಾತ್ರೆ ತಲುಪುವ ಮುನ್ನ ಜನಾಂದೋಲನ ಮಾಡಿದ್ದರು. ಮತ್ತೊಂದೆಡೆ ಸ್ವತಃ ಸಿದ್ದರಾಮಯ್ಯನವರು ಮೈಸೂರಿನಲ್ಲಿದ್ದು, ಜನಾಂದೋಲನಕ್ಕೆ ಸಿದ್ಧತೆ ಮಾಡಿದ್ದರು. ಮುಖ್ಯಮಂತ್ರಿಗಳು ರಾಜ್ಯದ ಜನರ ವಿಶ್ವಾಸ ಕಳಕೊಂಡಿದ್ದಾರೆ. ಅವರ ಕುರಿತು ಕಾಂಗ್ರೆಸ್ಸಿನ ಶಾಸಕರೂ ವಿಶ್ವಾಸ ಕಳಕೊಳ್ಳುತ್ತಿದ್ದಾರೆ ಎಂದು ತಿಳಿಸಿದರು.

ಅಭಿವೃದ್ಧಿ ಕೆಲಸಗಳು ಶುರುವೇ ಆಗಿಲ್ಲ.. ಇವತ್ತಲ್ಲ ನಾಳೆ ಸಿಎಂ ರಾಜೀನಾಮೆ ಕೊಡಲೇಬೇಕು. ಹೈಕೋರ್ಟಿನ ತೀರ್ಪು ಬಂದ ಬಳಿಕವಾದರೂ ಅವರು ರಾಜೀನಾಮೆ ನೀಡಲಿದ್ದಾರೆ ಎಂದು ಬಿ.ವೈ.ವಿಜಯೇಂದ್ರ ಅವರು ವಿಶ್ವಾಸ ವ್ಯಕ್ತಪಡಿಸಿದರು. ಇವತ್ತಲ್ಲ ನಾಳೆ ಆ 14 ನಿವೇಶನಗಳು ಮುಡಾ ಪಾಲಾಗಿ ಬಡವರಿಗೆ ಸಿಗಲಿದೆ ಎಂದು ತಿಳಿಸಿದರು. ಈ ಕಾಂಗ್ರೆಸ್ ಸರಕಾರವು ಅಧಿಕಾರಕ್ಕೆ ಬಂದ ಬಳಿಕ ಭ್ರಷ್ಟಾಚಾರದಲ್ಲಿ ಮುಳುಗಿದೆ.

ಅಭಿವೃದ್ಧಿ ಕೆಲಸಗಳು ಶುರುವೇ ಆಗಿಲ್ಲ. ಯಾವುದೇ ಹೊಸ ಯೋಜನೆಯನ್ನು ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರಕಾರ ಅನುಷ್ಠಾನ ಮಾಡುತ್ತಿಲ್ಲ ಎಂದು ಟೀಕಿಸಿದರು. ಸರಕಾರದ ಗ್ಯಾರಂಟಿ ಪರಿಣಾಮವಾಗಿ ಕೆಎಸ್‍ಆರ್‍ಟಿಸಿಗೆ 4,500 ಕೋಟಿ ರೂ. ಕೊಡಬೇಕಿದೆ. ಇನ್ನೂ ಮೂರ್ನಾಲ್ಕು ತಿಂಗಳು ಹೀಗೇ ಮುಂದುವರೆದರೆ ಕೆಎಸ್‍ಆರ್‍ಟಿಸಿ ಬಾಗಿಲು ಮುಚ್ಚಲಿದೆ. ಸಂಬಳ ಕೊಡಲೂ ದುಡ್ಡಿಲ್ಲ. ಮತ್ತೊಂದು ಕಡೆ ಅಂಗನವಾಡಿ ಕಾರ್ಯಕರ್ತೆಯರಿಗೆ ಗೌರವಧನ ಹೆಚ್ಚಿಸುವುದಾಗಿ ತಿಳಿಸಿದ್ದರು.

ರಾಜ್ಯದ ಆರ್ಥಿಕ ಪರಿಸ್ಥಿತಿ ಸಂಪೂರ್ಣ ಕುಗ್ಗಿ ಹೋಗಿದ್ದು, 14 ಬಜೆಟ್ ಮಂಡಿಸಿದ ಅನುಭವಿ ಮುಖ್ಯಮಂತ್ರಿಗಳಿದ್ದರೂ ಅಂಗನವಾಡಿ ಕಾರ್ಯಕರ್ತೆಯರ ಗೌರವಧನ ಹೆಚ್ಚಿಸುವುದು ಇರಲಿ; ಅವರ ಗೌರವಧನವನ್ನು 3 ತಿಂಗಳಿಂದ ಪಾವತಿಸಿಲ್ಲ ಎಂದು ಆಕ್ಷೇಪಿಸಿದರು. ಕರ್ನಾಟಕದಲ್ಲಿ ಮಹಿಳೆಯರ ಮೇಲೆ ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತಿವೆ. ಕಾನೂನು- ಸುವ್ಯವಸ್ಥೆ ಹಾಳಾಗಿದೆ ಎಂದರು.

ಸರಕಾರ ಕಾಲಹರಣ ಮಾಡುತ್ತಿದೆ. ವಾಲ್ಮೀಕಿ ನಿಗಮದಲ್ಲಿ 87 ಕೋಟಿ ಹಗರಣ ನಡೆದ ಕುರಿತು ಮುಖ್ಯಮಂತ್ರಿಗಳು ಒಪ್ಪಿಕೊಂಡಿದ್ದಾರೆ. ಅದೇ ಮಾದರಿಯಲ್ಲಿ ಮುಡಾದ ತಪ್ಪನ್ನೂ ಒಪ್ಪಿಕೊಂಡು, ನ್ಯಾಯಾಲಯದ ಆದೇಶಕ್ಕೆ ಕಾಯದೆ ಕೂಡಲೇ ರಾಜೀನಾಮೆ ಕೊಟ್ಟರೆ ಒಳಿತು ಎಂದು ಕಿವಿಮಾತು ಹೇಳಿದರು. ಮಾನ್ಯ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಭೇಟಿ ಮಾಡಿ ಪಾದಯಾತ್ರೆಯ ಯಶಸ್ಸಿನ ವಿಷಯದಲ್ಲಿ ಮಾಹಿತಿ ಹಂಚಿಕೊಂಡಿದ್ದೇನೆ.

ರಾಷ್ಟ್ರೀಯ ಅಧ್ಯಕ್ಷರು ಪಾದಯಾತ್ರೆ ಯಶಸ್ಸಿನ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ವಿವರಿಸಿದರು. ಕರ್ನಾಟಕದಲ್ಲಿ ಕಳೆದ ಬಾರಿ 1.05 ಕೋಟಿ ಸದಸ್ಯತ್ವವನ್ನು ನಾವು ನೋಂದಣಿ ಮಾಡಿಸಿದ್ದೆವು. ಈ ಬಾರಿ ಇನ್ನೂ ಹೆಚ್ಚು ಸದಸ್ಯತ್ವ ದಾಖಲಿಸುವ ಕುರಿತು ಕೂಡ ಗಮನ ಸೆಳೆದುದಾಗಿ ಹೇಳಿದರು.

ಅಹಿಂದ ಸಮುದಾಯಗಳಿಗೆ ಅನ್ಯಾಯ..
ವಾಲ್ಮೀಕಿ ನಿಗಮದ ಹಗರಣ ಸಂಬಂಧ ಎಸ್‍ಐಟಿ ರಚಿಸಿ ಕ್ಲೀನ್ ಚಿಟ್ ಕೊಡಿಸುವ ಅಗತ್ಯ ಏನಿತ್ತು? ಸರಕಾರದ ದಲಿತರ ಕಾಳಜಿ ಅಂದರೆ ಇದೇನಾ ಎಂದು ವಿಜಯೇಂದ್ರ ಅವರು ಪ್ರಶ್ನಿಸಿದರು. ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಈ ಹಗರಣಕ್ಕೆ ಸಂಬಂಧಿಸಿ ಸಿಬಿಐ, ಇ.ಡಿ. ತನಿಖೆ ನಡೆಯುತ್ತಿವೆ. ಇದೊಂದು ಗಂಭೀರ ಪ್ರಕರಣ. ಲೆಕ್ಕಾಧಿಕಾರಿ ಚಂದ್ರಶೇಖರ್ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತಮ್ಮ ಶಾಸಕರನ್ನು ದೂರವಿಟ್ಟು ಯಾರಿಗೆ ದ್ರೋಹ ಮಾಡುತ್ತಿದ್ದೀರಿ? ಅಹಿಂದ ಸಮುದಾಯಗಳಿಗೆ ಸಿದ್ದರಾಮಯ್ಯನವರು ಅನ್ಯಾಯ ಮಾಡುತ್ತಿದ್ದಾರೆ ಎಂದು ಅವರು ಆಕ್ಷೇಪಿಸಿದರು.

ಹಿಂದೆ ಇದೇ ಸಿದ್ದರಾಮಯ್ಯನವರು ಎಸಿಬಿ ಮೂಲಕ ಕ್ಲೀನ್ ಚಿಟ್ ಪಡೆದುಕೊಂಡ ಇತಿಹಾಸ ಇದೆ ಎಂದ ಅವರು, ರಾಷ್ಟ್ರಮಟ್ಟದಲ್ಲಿ ಸಿದ್ದರಾಮಯ್ಯನವರ ವಿಚಾರದಲ್ಲಿ ಹೋರಾಟ ಮಾಡುವ ಕುರಿತು ರಾಜ್ಯದ ನಾಯಕರ ಕೆಲವು ಸಲಹೆಗಳಿದ್ದು, ಅದರ ಬಗ್ಗೆ ಚರ್ಚಿಸಿ ನಿರ್ಧರಿಸುತ್ತೇವೆ ಎಂದು ಪ್ರಶ್ನೆಗೆ ಉತ್ತರ ಕೊಟ್ಟರು

ಪಕ್ಷದ ವರಿಷ್ಠರು ನನ್ನನ್ನು ರಾಜ್ಯಾಧ್ಯಕ್ಷನನ್ನಾಗಿ ಮಾಡಿದ್ದಾರೆ. ಯತ್ನಾಳ್ ಅಥವಾ ಇನ್ಯಾರದೋ ವಿರುದ್ಧ ದೆಹಲಿಯಲ್ಲಿ ದೂರು ಕೊಡಲು ನನ್ನನ್ನು ರಾಜ್ಯಾಧ್ಯಕ್ಷನನ್ನಾಗಿ ಮಾಡಿಲ್ಲ; ಸಂಘಟನೆ ಬಲಪಡಿಸಲು, ಬಿಜೆಪಿ ಸ್ಪಷ್ಟ ಬಹುಮತ ಪಡೆಯಲು ರಾಜ್ಯಾಧ್ಯಕ್ಷನನ್ನಾಗಿ ಮಾಡಿದ್ದಾರೆ. ಯತ್ನಾಳ್ ಅವರ ಕುರಿತು ಇಲ್ಲಿ ನಾನು ಪ್ರಸ್ತಾಪಿಸಿಲ್ಲ; ಅದರ ಅವಶ್ಯಕತೆಯೂ ನನಗಿಲ್ಲ ಎಂದು ಪ್ರಶ್ನೆಗೆ ಉತ್ತರ ನೀಡಿದರು.

ಪಕ್ಷದ ಬೆಳವಣಿಗೆಗೆ ಪೂರಕ ಇದ್ದರೆ, ರಾಷ್ಟ್ರೀಯ ನಾಯಕರ ಒಪ್ಪಿಗೆ ಇದ್ದರೆ ಇನ್ನೊಂದು ಪಾದಯಾತ್ರೆ ಮಾಡಬಹುದು ಎಂದು ಇನ್ನೊಂದು ಪ್ರಶ್ನೆಗೆ ಉತ್ತರ ಕೊಟ್ಟರು. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷಕ್ಕೆ ಬಲ ತುಂಬಲಿದ್ದೇನೆ ಎಂದು ಅವರು ತಿಳಿಸಿದರು.

Leave a Reply

Your email address will not be published. Required fields are marked *