ಕಿರುತೆರೆಯ ಕಾಮಿಡಿ ಕಿಲಾಡಿಗಳು ಶೋ ಮೂಲಕ ಗುರುತಿಸಿಕೊಂಡಿದ್ದ, ನಟ ಮಡೆನೂರು ಮನು ಅವರು ಇತ್ತೀಚೆಗೆ ಸಾಕಷ್ಟು ವಿವಾದ ಮಾಡಿಕೊಂಡರು. ಅವರ ಮೇಲೆ ಸ್ನೇಹಿತೆಯೇ ಅತ್ಯಾಚಾರ ಆರೋಪ ಹೊರಿಸಿದರು. ಬಳಿಕ ಮನು ಅವರದ್ದು ಎನ್ನಲಾದ ಆಡಿಯೋ ವೈರಲ್ ಆಯಿತು.

ಆ ಆಡಿಯೋದಲ್ಲಿ ಶಿವರಾಜ್​ಕುಮಾರ್, ಧ್ರುವ ಸರ್ಜಾ, ದರ್ಶನ್ ಬಗ್ಗೆ ಕೆಟ್ಟದಾಗಿ ಮಾತನಾಡಲಾಗಿತ್ತು. ಆ ಹಿನ್ನೆಲೆಯಲ್ಲಿ ಮನು ಅವರನ್ನು ಚಿತ್ರರಂಗದಿಂದ ಬ್ಯಾನ್ ಮಾಡಲಾಗಿತ್ತು. ಆದರೆ ಈಗ ಮನುಗೆ ಬಿಗ್ ರಿಲೀಫ್ ಸಿಕ್ಕಿದೆ. ಅವರ ಮೇಲೆ ಹೇರಿದ್ದ ನಿಷೇಧವನ್ನು ತೆರೆವುಗೊಳಿಸಲು ತೀರ್ಮಾನಿಸಲಾಗಿದೆ.

ದರ್ಶನ್, ಶಿವಣ್ಣ, ಧ್ರುವ ಸರ್ಜಾ ಬಗ್ಗೆ ಮಡೆನೂರು ಮನು ಆಕ್ಷೇಪಾರ್ಹ ರೀತಿಯಲ್ಲಿ ಮಾತನಾಡಿದ್ದರು. ಅದರಿಂದಾಗಿ ಅಭಿಮಾನಿಗಳು ಗರಂ ಆಗಿದ್ದರು. ಆಡಿಯೋ ವೈರಲ್ ಆದ ಬೆನ್ನಲೇ 100ಕ್ಕೂ ಅಧಿಕ ಕೇಸ್​ಗಳು ಮನು ಮೇಲೆ ದಾಖಲಿಸಲಾಗಿತ್ತು. ಚಿತ್ರರಂಗದಿಂದ ಮನು ಅವರನ್ನು ಬ್ಯಾನ್ ಮಾಡಬೇಕು ಎಂದು ಶಿವರಾಜ್​ಕುಮಾರ್, ದರ್ಶನ್ ಹಾಗೂ ಧ್ರುವ ಸರ್ಜಾ ಅವರ ಅಭಿಮಾನಿಗಳು ಒತ್ತಾಯಿಸಿದ್ದರು.

ಈ ಮೂವರೂ ಸ್ಟಾರ್ ಕಲಾವಿದರ ಬಳಿ ಕ್ಷಮೆ ಕೇಳಲು ಮಡೆನೂರು ಮನು ಮುಂದಾದರು. ಕ್ಷಮೆ ಕೇಳಲು ಶಿವರಾಜ್​ಕುಮಾರ್ ಮನೆ ಮುಂದೆ ಅವರು ಕಾದಿದ್ದರು. ಆದರೆ ಶಿವಣ್ಣನನ್ನು ಭೇಟಿಯಾಗಲು ಸಾಧ್ಯವಾಗಲಿಲ್ಲ. ಇದೀಗ ನಿರ್ಮಾಪಕ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್ ಅವರನ್ನು ಮನು ಭೇಟಿ ಆಗಿದ್ದಾರೆ. ಮೂವರೂ ನಟರಿಗೆ ಕ್ಷಮೆ ಕೋರಿ ಮನು ಪತ್ರ ಬರೆದಿದ್ದಾರೆ.

ಮಡೆನೂರು ಮನು ಕ್ಷಮೆ ಕೇಳಿ ಪತ್ರ ಬರೆದಿರುವ ಹಿನ್ನೆಲೆಯಲ್ಲಿ ಅವರಿಗೆ ಒಂದು ಅವಕಾಶ ನೀಡುವುದಾಗಿ ಉಮೇಶ್ ಬಣಕಾರ್ ಹೇಳಿದ್ದಾರೆ. ‘ಮನು ವಿವಾದ ಕೋರ್ಟ್​ ಮೆಟ್ಟಿಲೇರಿತ್ತು. ಪ್ರಾಯಶ್ಚಿತ್ತ, ಪಾಪಪ್ರಜ್ಞೆ ಅವರಿಗೆ ಕಾಡಿದೆ. ಈ ಕ್ಷಮಾಪಣೆಯ ಕಾಗದ ನೀಡಿದ್ದಾರೆ. ಬಹಿರಂಗವಾಗಿ ಅವರು ಕ್ಷಮೆ ಕೇಳಿದ್ದಾರೆ. ಮುಂದಿನ ದಿನಗಳಲ್ಲಿ ಅವರು ಚಿತ್ರರಂಗ ಮತ್ತು ಕಿರುತೆರೆಯಲ್ಲಿ ಅವಕಾಶ ಮಾಡಿಕೊಡಿ ಅಂತ ಅವರು ಮನವಿ ಮಾಡಿದ್ದಾರೆ. ಅದನ್ನು ಪುರಸ್ಕರಿಸುತ್ತೇವೆ’ ಎಂದು ಉಮೇಶ್ ಬಣಕಾರ್ ಹೇಳಿದ್ದಾರೆ.

ಮುಂದೆ ಈ ರೀತಿ ವಿವಾದ ಆಗದಂತೆ ನೋಡಿಕೊಳ್ಳಿ. ಹಿರಿಯರು ಚಿತ್ರರಂಗವನ್ನು ಕಟ್ಟಿ ಬೆಳೆಸಲು ಸಾಕಷ್ಟು ಕೊಡುಗೆ ನೀಡಿದ್ದಾರೆ. ನೀವು ಇನ್ನೂ ಉದಯೋನ್ಮುಖರು. ನಿಮಗೆ ಒಂದು ಭವಿಷ್ಯ ಇದೆ. ಮತ್ತೆ ತಪ್ಪು ನಡೆದರೆ ಯಾರೂ ನಿಮ್ಮನ್ನು ಕ್ಷಮಿಸಲ್ಲ’ ಎಂದು ಮಡೆನೂರು ಮನುಗೆ ಉಮೇಶ್ ಬಣಕಾರ್ ಅವರು ಬುದ್ಧಿ ಹೇಳಿದ್ದಾರೆ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *