ನವದೆಹಲಿ : ದೆಹಲಿ ವಿಧಾನಸಭಾ ಚುನಾವಣೆಯ ಪ್ರಚಾರದ ಅಖಾಡದಲ್ಲಿ ಎಎಪಿ ಹಾಗೂ ಬಿಜೆಪಿ ನಡುವೆ ವಾಕ್ಸಮರ, ಆರೋಪ, ಪ್ರತ್ಯಾರೋಪ ಜೋರಾಗಿ ನಡೆಯುತ್ತಿದೆ.

ಯಮುನಾ ನದಿ ಶುದ್ಧೀಕರಿಸುವುದಾಗಿ ನೀಡಿದ್ದ ಭರವಸೆ ಈಡೇರಿಸುವಲ್ಲಿ ವಿಫಲರಾಗಿದ್ದಾರೆ ಎಂದು ಆರೋಪಿಸಿ ಬಿಜೆಪಿ ಅಭ್ಯರ್ಥಿ ಪರ್ವೇಶ್ ವರ್ಮಾ ಇಂದು ಕೇಜ್ರಿವಾಲ್ ಪ್ರತಿಕೃತಿಯನ್ನು ಯುಮುನಾ ನದಿಯ ಕೆಸರಿನ ನೀರಿನಲ್ಲಿ ಮುಳುಗಿಸುವ ಮೂಲಕ ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಪರ್ವೇಶ್ ವರ್ಮಾ, ಯುಮುನಾ ನದಿ ಶುದ್ಧೀಕರಿಸುವುದಾಗಿ ನೀಡಿದ್ದ ಭರವಸೆ ಈಡೇರಿಸುವಲ್ಲಿ ಕೇಜ್ರಿವಾಲ್ ವಿಫಲರಾಗಿದ್ದಾರೆ ಎಂದು ಆರೋಪಿಸಿದರು. 11 ವರ್ಷಗಳ ಕಾಲ ಅಧಿಕಾರದಲ್ಲಿದ್ದು, ರೂ.8,000 ವೆಚ್ಚ ಮಾಡಿದ್ದರೂ ಯುಮುನಾ ನದಿ ಶುದ್ಧೀಕರಣ ಕುರಿತು ನೀಡಿದ್ದ ಭರವಸೆ ಈಡೇರಿಸುವಲ್ಲಿ AAP ಸರ್ಕಾರ ವಿಫಲವಾಗಿದೆ. ಇದು ದೆಹಲಿ ಜನತೆಗೆ ಮಾಡಿದ ಮಹಾದ್ರೋಹ ಎಂದರು.

2025ರೊಳಗೆ ನದಿಯನ್ನು ಶುದ್ದೀಕರಿಸುವುದಾಗಿ ಕೇಜ್ರಿವಾಲ್ ಹೇಳಿದ್ದರು. ಆದರೆ, ಪರಿಸ್ಥಿತಿ ಹದಗೆಟ್ಟಿದೆ. ಅವರ ಪ್ರತಿಕೃತಿ ಮುಳುಗಿಸುವುದರೊಂದಿಗೆ ದೆಹಲಿ ಜನರಿಗೆ ಅವರ ವಿಫಲತೆಯನ್ನು ತೋರಿಸಿದ್ದೇವೆ. ಚುನಾವಣಾ ಪ್ರಚಾರದ ವೇಳೆಯನ್ನು ತನ್ನ ತಪ್ಪನ್ನು ಕೇಜ್ರಿವಾಲ್ ಒಪ್ಪಿಕೊಳ್ಳುತ್ತಿದ್ದು, ದೆಹಲಿಯಲ್ಲಿ ಮತ್ತೆ ಎಎಪಿ ಅಧಿಕಾರಕ್ಕೆ ಬಂದ ನಂತರ ಮುಂದಿನ ಎರಡ್ಮೂರು ವರ್ಷಗಳಲ್ಲಿ ನದಿ ಶುದ್ಧೀಕರಿಸುವುದಾಗಿ ಜನರಿಗೆ ಭರವಸೆ ನೀಡುತ್ತಿದ್ದಾರೆ.

ಅವರು ಮುಖ್ಯಮಂತ್ರಿಯಾಗಿದ್ದಾಗ ಬರೀ ಸುಳ್ಳು ಹೇಳಿಕೆ, ಪೊಳ್ಳು ಭರವಸೆ ನೀಡುವುದರಲ್ಲಿಯೇ ಕಾಲ ಕಳೆದರು. ದೆಹಲಿಯನ್ನು ಪೊಳ್ಳಿನ ಭರವಸೆಯಿಂದ ಮುಕ್ತಗೊಳಿಸುವ ಸಮಯ ಎಂದು ಜನರಿಗೆ ನೆನಪಿಸಲು ಯಮುನಾ ನದಿಯಲ್ಲಿ ಕೇಜ್ರಿವಾಲ್ ಪ್ರತಿಕೃತಿ ಮುಳುಗಿಸಲಾಗಿದೆ. ಈ ಮೂಲಕ “ಸುಳ್ಳು ಮತ್ತು ಪ್ರಚಾರದ” ರಾಜಕೀಯ ಮುಂದುವರಿಯುವವರೆಗೆ ದೆಹಲಿಯ ಸಮಸ್ಯೆಗಳು ಬಗೆಹರಿಯುವುದಿಲ್ಲ ಎಂಬ ಸ್ಪಷ್ಟ ಸಂದೇಶ ರವಾನಿಸಲಾಗಿದೆ ಎಂದು ಹೇಳಿದರು.

Leave a Reply

Your email address will not be published. Required fields are marked *