ಪಾಟ್ನಾ : ಲೋಕಸಭೆಯ ವಿರೋಧ ಪಕ್ಷದ ನಾಯಕ ಹಾಗೂ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಇಂದು ಬಿಹಾರದ ಪಾಟ್ನಾಕ್ಕೆ ಭೇಟಿ ನೀಡಿದ್ದಾರೆ. ಈ ವೇಳೆ ಸಂವಿಧಾನ ಸುರಕ್ಷಾ ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಿದ ಅವರು ಬಿಜೆಪಿ ಹಾಗೂ ಆರ್ಎಸ್ಎಸ್ ವಿರುದ್ಧ ವಾಗ್ದಾಳಿ ಮುಂದುವರೆಸಿದ್ದಾರೆ.
ಪ್ರತಿಯೊಂದು ಸಂಘಟನೆಯಲ್ಲೂ ಆರ್ಎಸ್ಎಸ್ನ ಜನರಿದ್ದಾರೆ. ಇಂದಿನ ಭಾರತದಲ್ಲಿ ಶಾಸಕರು ಮತ್ತು ಸಂಸದರಿಗೆ ಯಾವುದೇ ಅಧಿಕಾರವಿಲ್ಲದಂತಾಗಿದೆ ಎಂದು ಹೇಳಿದ್ದಾರೆ. ಭಾರತದ ಸ್ವಾತಂತ್ರ್ಯದ ಬಗ್ಗೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಅವರ ಹೇಳಿಕೆಗಳನ್ನು ಟೀಕಿಸಿದ ರಾಹುಲ್ ಗಾಂಧಿ, ಆರ್ಎಸ್ಎಸ್ ಡಾ.ಬಿ.ಆರ್. ಅಂಬೇಡ್ಕರ್ ಅವರ ಸಿದ್ಧಾಂತವನ್ನು ಅಳಿಸಿಹಾಕಿದೆ ಎಂದು ಆರೋಪಿಸಿದರು.
ಬಜೆಟ್‌ನಲ್ಲಿ ಹಿಂದುಳಿದ ಸಮುದಾಯದ ಪ್ರಾತಿನಿಧ್ಯವನ್ನು ಪ್ರಶ್ನಿಸಿದ ರಾಹುಲ್ ಗಾಂಧಿ, “ಕೇಂದ್ರ ಸರ್ಕಾರದ 90 ಹಿರಿಯ ಅಧಿಕಾರಿಗಳು ದೇಶದ ಬಜೆಟ್‌ನಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಅವರಲ್ಲಿ ದಲಿತರು, ಬುಡಕಟ್ಟು ಜನಾಂಗದವರು, ಹಿಂದುಳಿದ ವರ್ಗಗಳು ಮತ್ತು ಅಲ್ಪಸಂಖ್ಯಾತರ ಭಾಗವಹಿಸುವಿಕೆ ಶೇ.10ರಷ್ಟು ಕೂಡ ಇಲ್ಲ. ಆದರೆ, ಭಾರತದ ಜನಸಂಖ್ಯೆಯಲ್ಲಿ ಈ ವರ್ಗಗಳ ಪಾಲು ಶೇ.90ರಷ್ಟಿದೆ” ಎಂದು ಹೇಳಿದರು.
ದೇಶಾದ್ಯಂತ ಜಾತಿ ಜನಗಣತಿ ನಡೆಸಬೇಕೆಂದು ರಾಹುಲ್ ಗಾಂಧಿ ಒತ್ತಾಯಿಸಿದರು. ಅದಕ್ಕೆ ಅನುಗುಣವಾಗಿ ದೇಶವನ್ನು ಅಭಿವೃದ್ಧಿ ಮಾಡಬೇಕು ಎಂದು ಅವರು ಸಲಹೆ ನೀಡಿದರು. ಜಾತಿಗಣತಿ ಪ್ರತಿಯೊಂದು ಜಾತಿಯಲ್ಲೂ ಎಷ್ಟು ಜನಸಂಖ್ಯೆ ಇದೆ ಮತ್ತು ಅಧಿಕಾರಶಾಹಿ, ಶಿಕ್ಷಣ ಸಂಸ್ಥೆಗಳು ಮತ್ತು ಖಾಸಗಿ ಕಂಪನಿಗಳಲ್ಲಿ ಆ ಜಾತಿಯವರು ಎಷ್ಟು ಭಾಗವಹಿಸುತ್ತಿದ್ದಾರೆ ಎಂಬುದನ್ನು ಬಹಿರಂಗಪಡಿಸುತ್ತದೆ” ಎಂದು ಹೇಳಿದರು.