ರಾಜ್ಯ ಸರ್ಕಾರವನ್ನು ಬೀಳಿಸಲು ಭಾರತೀಯ ಜನತಾ ಪಕ್ಷವು (ಬಿಜೆಪಿ) ಕಾಂಗ್ರೆಸ್ ಶಾಸಕರಿಗೆ 100 ಕೋಟಿ ರೂಪಾಯಿ ನೀಡುತ್ತಿದೆ ಎಂದು ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು (ಆಗಸ್ಟ್ 30) ಆರೋಪಿಸಿದ್ದಾರೆ.
ನಮ್ಮ ಶಾಸಕರಿಗೆ ಬಿಜೆಪಿ 100 ಕೋಟಿ ರೂಪಾಯಿ ನೀಡುತ್ತಿದೆ ಎಂದು ಶಾಸಕ ರವಿಕುಮಾರ್ ಗೌಡ ಮಾಹಿತಿ ನೀಡಿದ್ದಾರೆ. ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದ್ದು ಆಪರೇಷನ್ ಕಮಲದ ಮೂಲಕವೇ. ಅವರು ಎಂದಿಗೂ ಜನರ ಆಶೀರ್ವಾದದಿಂದ ಅಧಿಕಾರಕ್ಕೆ ಬಂದಿಲ್ಲ. 2008 ಮತ್ತು 2019 ರಲ್ಲಿ ಅವರು ‘ಆಪರೇಷನ್ ಕಮಲ’ ಮತ್ತು ಹಿಂಬಾಗಿಲು ಪ್ರವೇಶದ ಮೂಲಕ ಅಧಿಕಾರಕ್ಕೆ ಬಂದರು, ”ಎಂದು ಮುಖ್ಯಮಂತ್ರಿ ಹೇಳಿದರು.
ನೆನಪಿರಲಿ, ಕಾಂಗ್ರೆಸ್ 136 ಶಾಸಕರನ್ನು ಹೊಂದಿದೆ. ನಮ್ಮ ಸರ್ಕಾರವನ್ನು ಬೀಳಿಸುವುದು ಸುಲಭವಲ್ಲ. ಬಿಜೆಪಿ ಅಧಿಕಾರಕ್ಕೆ ಬರಲು ಸುಮಾರು 60 ಶಾಸಕರು ರಾಜೀನಾಮೆ ನೀಡಬೇಕು. ನಮ್ಮ ಯಾವ ಶಾಸಕರೂ ಹಣದ ಆಮಿಷಕ್ಕೆ ಒಳಗಾಗುವುದಿಲ್ಲ ಎಂಬ ವಿಶ್ವಾಸ ನನಗಿದೆ ಎಂದು ಮುಖ್ಯಮಂತ್ರಿ ಹೇಳಿದರು.
16ನೇ ಹಣಕಾಸು ಆಯೋಗದ ಬಗ್ಗೆ ಸಿದ್ದರಾಮಯ್ಯ
16ನೇ ಹಣಕಾಸು ಆಯೋಗದ ಅಧ್ಯಕ್ಷ ಅರವಿಂದ್ ಪನಗಾರಿಯಾ ಅವರನ್ನು ಭೇಟಿ ಮಾಡಿ, ಚರ್ಚಿಸಿ ಜ್ಞಾಪಕ ಪತ್ರವನ್ನೂ ಸಲ್ಲಿಸಿದ್ದೇವೆ ಎಂದರು.
“ನಾವು ನಮ್ಮ ಬೇಡಿಕೆಗಳನ್ನು ಮಂಡಿಸಿದ್ದೇವೆ. 15ನೇ ಹಣಕಾಸು ಆಯೋಗದಿಂದ ರಾಜ್ಯಕ್ಕೆ ಆಗಿರುವ ಅನ್ಯಾಯದ ವಿರುದ್ಧ ದೆಹಲಿಯಲ್ಲಿ ಪ್ರತಿಭಟನೆ ನಡೆಸಿದ್ದೇವೆ. ಆಯೋಗ ಶಿಫಾರಸು ಮಾಡಿದ್ದ 11,495 ಕೋಟಿ ವಿಶೇಷ ಅನುದಾನ ನೀಡಿಲ್ಲ. ಇದರಿಂದ ರಾಜ್ಯಕ್ಕೆ ಶೇ.1.66ರಷ್ಟು ನಷ್ಟವಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು.
ಒಟ್ಟು 15ನೇ ಹಣಕಾಸು ಆಯೋಗದಿಂದ ಐದು ವರ್ಷಗಳಲ್ಲಿ 80,000 ಕೋಟಿ ರೂಪಾಯಿ ನಷ್ಟವಾಗಿದೆ ಎಂದ ಅವರು, 15ನೇ ಹಣಕಾಸು ಆಯೋಗದ ತಪ್ಪುಗಳನ್ನು ಆಯೋಗ ಸರಿಪಡಿಸುತ್ತದೆ ಎಂದು ನಾವು ನಂಬುತ್ತೇವೆ ಎಂದರು.