ನವದೆಹಲಿ : ವಿಧಾನಸಭೆ ಚುನಾವಣೆ ಹಿನ್ನೆಲೆ ಬಿಜೆಪಿ ನಾಯಕರು ಬಹಿರಂಗವಾಗಿ ಮತದಾರರಿಗೆ ಹಣ ಹಂಚುತ್ತಿದ್ದಾರೆ. ಮತ್ತೊಂದೆಡೆ ಮತದಾರರ ಪಟ್ಟಿಯಿಂದ ಮತದಾರರ ಹೆಸರನ್ನ ತೆಗೆದು ಹಾಕುತ್ತಿದ್ದಾರೆ. ಇಂತಹ ಪ್ರಜಾಪ್ರಭುತ್ವ ವಿರೋಧಿ ನಡೆಗಳನ್ನು ಆರ್‌ಎಸ್‌ಎಸ್ ಸಮರ್ಥಿಸಿಕೊಳ್ಳುತ್ತದೆಯೇ ಎಂದು ದೆಹಲಿ ಮಾಜಿ ಸಿಎಂ ಅರವಿಂದ್‌ ಕೇಜ್ರಿವಾಲ್‌ ಪ್ರಶ್ನಿಸಿದ್ದಾರೆ.

ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್‌ಗೆ ಪತ್ರ ಬರೆದಿರುವ ಕೇಜ್ರಿವಾಲ್, ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುವ ಬಿಜೆಪಿಯ ತಪ್ಪುಗಳನ್ನು ಎತ್ತಿ ತೋರಿಸಿದ್ದಾರೆ ಮತ್ತು ಅಂತಹ ಕ್ರಮಗಳನ್ನು ಮೋಹನ್ ಭಾಗವತ್ ಬೆಂಬಲಿಸುತ್ತಾರೆಯೇ ಎಂದು ಪ್ರಶ್ನೆ ಮಾಡಿದ್ದಾರೆ.

ಬಿಜೆಪಿ ನಾಯಕರು ಬಹಿರಂಗವಾಗಿ ಹಣ ಹಂಚಿ ಮತ ಖರೀದಿಸುತ್ತಿದ್ದಾರೆ. ಆರ್‌ಎಸ್‌ಎಸ್ ಮತ ಖರೀದಿಯನ್ನು ಬೆಂಬಲಿಸುತ್ತದೆಯೇ? ಹಲವು ವರ್ಷಗಳಿಂದ ಬಡವರು, ದಲಿತರು, ಪೂರ್ವಾಂಚಲದ ಜನರು, ಸ್ಲಂ ನಿವಾಸಿಗಳ ಮತಗಳನ್ನು ಬಿಜೆಪಿ ಮತದಾರರ ಪಟ್ಟಿಯಿಂದ ತೆಗೆದು ಹಾಕಲು ದೊಡ್ಡ ಮಟ್ಟದಲ್ಲಿ ಪ್ರಯತ್ನಗಳು ನಡೆಯುತ್ತಿವೆ. ಇದನ್ನು ಮಾಡುವುದು ಭಾರತೀಯ ಪ್ರಜಾಪ್ರಭುತ್ವಕ್ಕೆ ಸರಿ ಎಂದು ಆರ್‌ಎಸ್‌ಎಸ್‌ ಭಾವಿಸುತ್ತದೆಯೇ? ಎಂದು ಪತ್ರದಲ್ಲಿ ಕೇಳಿದ್ದಾರೆ.

ಅರವಿಂದ್ ಕೇಜ್ರಿವಾಲ್ ಪತ್ರಕ್ಕೆ ಬಿಜೆಪಿ ನಾಯಕರು ತಿರುಗೇಟು ನೀಡಿದ್ದಾರೆ. ಹೊಸ ವರ್ಷದಲ್ಲಿ ಕೇಜ್ರಿವಾಲ್ ಸುಳ್ಳು ಹೇಳುವುದನ್ನು ನಿಲ್ಲಿಸಲಿ ಎಂದು ದೆಹಲಿ ಜನತೆ ಹಾರೈಸಿದ್ದಾರೆ. ಕೇಜ್ರಿವಾಲ್ ತಮ್ಮ ಮಕ್ಕಳ ಮೇಲೆ ಸುಳ್ಳು ಪ್ರಮಾಣ ಮಾಡಬಾರದು. ಕೇಜ್ರಿವಾಲ್ ಅವರು ದೇಶ ವಿರೋಧಿ ಶಕ್ತಿಗಳಿಂದ ದೇಣಿಗೆ ಸ್ವೀಕರಿಸುವುದಿಲ್ಲ ಎಂದು ಪ್ರತಿಜ್ಞೆ ಮಾಡಬೇಕು. ಕೇಜ್ರಿವಾಲ್ ದೆಹಲಿ ಜನತೆಗೆ ಸುಳ್ಳು ಭರವಸೆ ನೀಡುವುದಿಲ್ಲ ಎಂದು ಹೊಸ ವರ್ಷದಲ್ಲಿ ಪ್ರಮಾಣ ವಚನ ಸ್ವೀಕರಿಸಬೇಕು ಎಂದು ದೆಹಲಿ ಬಿಜೆಪಿ ಮುಖ್ಯಸ್ಥ ವೀರೇಂದ್ರ ಸಚ್‌ದೇವ ಕುಟುಕಿದ್ದಾರೆ ಎನ್ನಲಾಗಿದೆ.

Leave a Reply

Your email address will not be published. Required fields are marked *