ಬೆಂಗಳೂರು : ಮಹಿಳೆಯೊಬ್ಬರನ್ನ ಬರ್ಬರವಾಗಿ ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ರೋಚಕ ಸಂಗತಿಯೊಂದು ಬಯಲಾಗಿದೆ. ದಿನಾ ಕುಡಿದು ಬಂದು ರಂಪಾಟ ಮಾಡುತ್ತಿದ್ದಳು, ಇದೇ ವಿಷಯಕ್ಕಾಗಿ ಸ್ನೇಹಿತ ಕೊಲೆ ಮಾಡಿದ ವಿಚಾರ ತನಿಖೆ ವೇಳೆ ತಿಳಿದುಬಂದಿದೆ. ಈ ಪ್ರಕರಣ ದಾಖಲಾದ 20 ಗಂಟೆಯೊಳಗಾಗಿ ಸಿ.ಕೆ.ಅಚ್ಚುಕಟ್ಟು ಠಾಣಾ ಪೊಲೀಸರು ಅಸ್ಸಾಂ ಮೂಲದ ಸಂಶುದ್ದೀನ್‌ನನ್ನು ಬಂಧಿಸಿದ್ದರು.

ಪ್ರಾಥಮಿಕ ತನಿಖೆ ವೇಳೆ, ಹುಳಿಮಾವು ಬಳಿಕ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುವಾಗ ಕೊಲೆಯಾದ ಪುಷ್ಪಾ @ ಆಶಾ ಹಾಗೂ ಆರೋಪಿ ಸಂಶುದ್ದೀನ್‌ಗೆ ಪರಿಚಯವಾಗಿತ್ತು. ಕಳೆದ ಎರಡು ವರ್ಷಗಳಿಂದ ಇಬ್ಬರು ಲಿವ್ ಇನ್ ರಿಲೇಷನ್‌ನಲ್ಲಿದ್ದರು.

ಮೃತ ಮಹಿಳೆ ದಿನಾಲೂ ಮನೆಗೆ ಬರುವಾಗ ಕುಡಿದು ಬಂದು ರಂಪಾಟ ಮಾಡುತ್ತಿದ್ದಳು. ಜೊತೆಗೆ ತಡರಾತ್ರಿವರೆಗೂ ಫೋನ್‌ನಲ್ಲಿ ಮಾತಾಡುತ್ತಿದ್ದಳು. ಇದೇ ಕಾರಣದಿಂದ ಇಬ್ಬರ ನಡುವೆ ಜಗಳವಾಗಿತ್ತು. ಜಗಳ ಅತಿರೇಕಕ್ಕೆ ಹೋಗಿ, ಹಲ್ಲೆ ಮಾಡಿ ಕೊಲೆ ಮಾಡಲಾಗಿದೆ. ಬಳಿಕ ಮೃತದೇಹವನ್ನು ಮೂಟೆಗೆ ಹಾಕಿ, ಬೈಕ್‌ನಲ್ಲಿ ತಂದು ಕಸದ ಲಾರಿಗೆ ಹಾಕಿ ಹೋಗಿದ್ದ ಎಂದು ತಿಳಿದುಬಂದಿದೆ.

ಆಶಾಗೆ ಇದಕ್ಕೂ ಮೊದಲು ಮದುವೆಯಾಗಿದ್ದು, ಗಂಡ ಮೃತಪಟ್ಟಿದ್ದ. ಆಕೆಗೆ ಇಬ್ಬರು ಮಕ್ಕಳಿದ್ದರು. ಜೊತೆಗೆ ಆರೋಪಿ ಸಂಶುದ್ದೀನ್‌ಗೆ ಮದುವೆಯಾಗಿ ಹೆಂಡತಿ ಹಾಗೂ ಇಬ್ಬರು ಮಕ್ಕಳು ಅಸ್ಸಾಂನಲ್ಲಿದ್ದರು ಎಂದು ಬಯಲಾಗಿದೆ. ಚೆನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣಾ ವಾಪ್ತಿಯಲ್ಲಿ ಮಹಿಳೆಯೊಬ್ಬರನ್ನ ಬರ್ಬರವಾಗಿ ಹತ್ಯೆ ಮಾಡಿ, ಮೃತದೇಹವನ್ನ ಮೂಟೆ ಕಟ್ಟಿ ಕಸದ ಲಾರಿಯಲ್ಲಿಡಲಾಗಿತ್ತು.

ರಾತ್ರಿ 1:40ಕ್ಕೆ ಕಸ ಹಾಕಲು ಬಂದಿದ್ದ ಸ್ಥಳೀಯ ವ್ಯಕ್ತಿ ಚೀಲ ಬಿಚ್ಚಿದಾಗ ಮೊದಲಿಗೆ ಕೂದಲು ಕಂಡಿತ್ತು. ಬಳಿಕ ಮೃತದೇಹ ಇರೋದು ಗೊತ್ತಾಗಿ ತಕ್ಷಣ ಆ ವ್ಯಕ್ತಿ ಪೊಲೀಸರಿಗೆ ಮಾಹಿತಿ ನೀಡಿದ್ದ. ಪೊಲೀಸರು ಬಂದಾಗ ಮಹಿಳೆ ಕೊಲೆ ವಿಚಾರ ಬಯಲಾಗಿತ್ತು.

ಇನ್ನು ಸ್ಥಳಕ್ಕೆ ಆಗಮಿಸಿದ ಸಿಕೆ ಅಚ್ಚುಕಟ್ಟು ಪೊಲೀಸರು ಸ್ಥಳೀಯ ನೀಡಿದ ದೂರಿನ ಆಧಾರದಲ್ಲಿ ಎಫ್‌ಐಆರ್ ದಾಖಲಿಸಿಕೊಂಡಿದ್ದರು. ಸಿಸಿಟಿವಿ ಆಧಾರದ ಮೇಲೆ ಕೊಲೆ ಹಂತಕರಿಗಾಗಿ 2 ತಂಡಗಳ ರಚಿಸಿ ಶೋಧ ನಡೆಸುತ್ತಿದ್ದರು. ಬಳಿಕ ಮಹಿಳೆಯ ಗುರುತು ಪತ್ತೆ ಮಾಡಿದ್ದರು. ಕೊಲೆಯಾದ ಮಹಿಳೆ ಹುಳಿಮಾವು ನಿವಾಸಿ ಪುಷ್ಪಾ @ ಆಶಾ ಎಂದು ಗುರುತಿಸಲಾಗಿತ್ತು. ಅಲ್ಲದೇ, ಶವ ಸಾಗಾಟಕ್ಕೆ ದ್ವಿಚಕ್ರ ವಾಹನ ಬಳಕೆ ಮಾಡಿರೋದು ಗೊತ್ತಾಗಿತ್ತು. ಈ ಹಿನ್ನೆಲೆಯಲ್ಲಿ ಆರೋಪಿ ಪತ್ತೆಗೆ ಪೊಲೀಸರು ಬಲೆ ಬೀಸಿದ್ದರು.

ಈ ಪ್ರಕರಣ ದಾಖಲಾದ 20 ಗಂಟೆ ಒಳಗಾಗಿಯೇ ಹಂತಕನನ್ನು ಇನ್ಸ್‌ಪೆಕ್ಟರ್‌ ಗಿರೀಶ್ ನಾಯ್ಕ್ ನೇತೃತ್ವದ ತಂಡ ಬಂಧಿಸಿದೆ. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಹಂತಕನನ್ನ ಬಂಧಿಸಿದ್ದರು ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *