ಬೆಂಗಳೂರು : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮುಖ್ಯ ಆಯುಕ್ತರ ಕಚೇರಿ ಮೇಲೆ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಇಂದು ದಿಢೀರ್ ದಾಳಿ ನಡೆಸಿದ್ದಾರೆ. ಏಳು ಇಡಿ ಅಧಿಕಾರಿಗಳ ತಂಡ ಕೇಂದ್ರ ಕಚೇರಿಯಲ್ಲಿರುವ ಬಿಬಿಎಂಪಿ ಮುಖ್ಯ ಎಂಜಿನಿಯರ್ ಪ್ರಹ್ಲಾದ್ ಅವರ ಕಚೇರಿಯಲ್ಲಿ ಶೋಧ ಕಾರ್ಯ ನಡೆಸಿದೆ.
2016ರಲ್ಲಿ ನಡೆದಿದೆ ಎನ್ನಲಾದ ಬೋರ್‌ವೆಲ್ ಹಗರಣಕ್ಕೆ ಸಂಬಂಧಿಸಿದಂತೆ ಇಡಿ ಈ ದಾಳಿ ನಡೆಸಿದೆ. ಬೆಂಗಳೂರಿನಲ್ಲಿ ಬಿಬಿಎಂಪಿ ಕೊರೆಸಿದ್ದ ಬೋರ್‌ವೆಲ್‌ನಲ್ಲಿ 960 ಕೋಟಿ ಅವ್ಯವಹಾರ ನಡೆದಿದೆ ಎಂಬ ಆರೋಪ ಕೇಳಿಬಂದಿತ್ತು. ಈ ಹಗರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆದಿತ್ತು. ಇದೇ ಅವಧಿಯಲ್ಲಿ ಕ್ಷೇತ್ರದಲ್ಲಿ ಕೆಲಸ ಮಾಡಿದ ಎಇ, ಎಇಇಗಳನ್ನೂ ವಿಚಾರಣೆ ನಡೆಸಲಾಗಿದೆ ಎಂಬ ಮಾಹಿತಿ ಸಿಕ್ಕಿದೆ.
ಬಿಜೆಪಿ ಮುಖಂಡ ಎನ್.ಆರ್ ರಮೇಶ್ ಈ ಹಗರಣದ ಕುರಿತಂತೆ ಪ್ರಸ್ತಾಪಿಸಿ ದೂರು ಕೂಡ ದಾಖಲಿಸಿದ್ದರು. ಅವರ ದೂರಿನ ಆಧಾರದ ಮೇಲೆ ಇಡಿ ಬಿಬಿಎಂಪಿ ಮೇಲೆ ದಾಳಿ ನಡೆಸಿದೆ ಎನ್ನಲಾಗಿದೆ.