ಸಿಎಂ ಸಿದ್ದರಾಮಯ್ಯನವರ ವಿಧಾನಸಭೆ ಕ್ಷೇತ್ರವಾದ ವರುಣಾದಲ್ಲೇ ಜನರು ಕಾಂಗ್ರೆಸ್ ನಾಯಕರಿಗೆ ಬಹಿಷ್ಕಾರ ಹಾಕಿದ ಬೆಳವಣಿಗೆಯೊಂದು ನಡೆದಿದೆ.
ಗ್ರಾಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಸ್ಥಾಪನೆ ಸೇರಿದಂತೆ ಚುನಾವಣೆಗೂ ಮುನ್ನ ಸಿದ್ದರಾಮಯ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ನೀಡಿದ ಭರವಸೆಗಳನ್ನು ಈಡೇರಿಸದ ಕಾರಣ, ಬೇಸತ್ತ ಗ್ರಾಮಸ್ಥರು ಕಾಂಗ್ರೆಸ್ ನಾಯಕರಿಗೆ ಬಹಿಷ್ಕಾರ ಹಾಕಿದ್ದಾರೆ.
ಗ್ರಾಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಸ್ಥಾಪನೆಗೆ ಎಂಎಲ್‌ಸಿ ಯತೀಂದ್ರ ಸಿದ್ದರಾಮಯ್ಯ ಅವರು ಶಂಕುಸ್ಥಾಪನೆ ನೆರವೇರಿಸಿ ಪ್ರತಿಷ್ಠಾನಕ್ಕೆ 3 ಲಕ್ಷ ಮೀಸಲಿಟ್ಟಿದ್ದರು. ಬಳಿಕ ಸಮುದಾಯದ ಮುಖಂಡರು ರೂ.20 ಲಕ್ಷ ಮೀಸಲಿಡುವಂತೆ ಮನವಿ ಮಾಡಿದ್ದರು. ಆದರೆ, ಸರ್ಕಾರ 3 ಲಕ್ಷ ನೀಡುವುದಾಗಿ ತಿಳಿಸಿದ್ದು, ಇದೇ ಅಸಮಾಧಾನಕ್ಕ ಕಾರಣವಾಗಿದೆ ಎಂದು ಹೇಳಲಾಗತ್ತಿದೆ.
ಇದೀಗ ವರುಣಾದ ನಗರ್ಲೆ ಗ್ರಾಮದಲ್ಲಿ ಕಾಂಗ್ರೆಸ್ ಮುಖಂಡರಿಗೆ ನಿಷೇಧ ಹೇರಲಾಗಿದೆ ಎಂಬ ಫ್ಲೆಕ್ಸ್‌ಗಳು ಅಲ್ಲಲ್ಲಿ ಕಾಣಿಸಿಕೊಂಡಿದೆ. ಕಾಂಗ್ರೆಸ್ ಮುಖಂಡರಿಗೆ ನಮ್ಮ ಗ್ರಾಮದ ಒಳಗೆ ಪ್ರವೇಶವಿಲ್ಲ ಎಂದು ಬ್ಯಾನರ್‌ಗಳಲ್ಲಿ ಬರೆಯಲಾಗಿದೆ.
ನಗರ್ಲೆ ಗ್ರಾಮದ ಕಾಂಗ್ರೆಸ್ ಮುಖಂಡರು ಕೈಲಾಗದವರು (ನಾಮರ್ದರು), ಆದ ಕಾರಣ ಯಾವುದೇ ಕಾಂಗ್ರೆಸ್ ಮುಖಂಡರನ್ನು ಗ್ರಾಮಕ್ಕೆ ನಿಷೇಧಿಸಲಾಗಿದೆ ಎಂದು ಫ್ಲೆಕ್ಸ್ ಹಾಕಲಾಗಿದೆ. ಈ ಕುರಿತ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಹಿನ್ನೆಲೆಯಲ್ಲಿ, ಇದೀಗ ಬ್ಯಾನರ್ ಗಳನ್ನು ತೆರವುಗೊಳಿಸಲಾಗಿದೆ ಎಂದು ಮಾಹಿತಿ ತಿಳಿದುಬಂದಿದೆ.