Boyfriend Murdered Girlfriend: 7 ವರ್ಷದ ಪ್ರೀತಿ, ಮದುವೆ ವಿಷ್ಯ ಬಂದಾಗ ಪ್ರೇಯಸಿಯ ಕೊಲೆ.. ಸೆಪ್ಟಿಕ್ ಟ್ಯಾಂಕ್ನಲ್ಲಿ ಶವ ಎಸೆದ ಪ್ರೇಮಿ ಅರೆಸ್ಟ್!
ದೆಹಲಿ ಮತ್ತು ಮಹಾರಾಷ್ಟ್ರದಲ್ಲಿ ನಡೆದ ಭೀಕರ ಕೊಲೆಗಳು ಮಾಸುವ ಮುನ್ನವೇ ಇಂಥದ್ದೇ ಮತ್ತೊಂದು ದುಷ್ಕೃತ್ಯ ಉತ್ತರ ಪ್ರದೇಶದಲ್ಲಿ ನಡೆದಿದೆ.
ಪ್ರಯಾಗ್ರಾಜ್ (ಉತ್ತರ ಪ್ರದೇಶ): ಏಳು ವರ್ಷದ ಪ್ರೇಯಸಿಯ ಕತ್ತು ಹಿಸುಕಿ ಕೊಲೆ ಮಾಡಿದ ದುಷ್ಕರ್ಮಿಯೊಬ್ಬ, ಬಳಿಕ ಆಕೆಯ ಮೃತದೇಹವನ್ನು ಸೆಪ್ಟಿಕ್ ಟ್ಯಾಂಕ್ನಲ್ಲಿ ಹೂತುಹಾಕಿರುವ ಘಟನೆ ಪ್ರಯಾಗ್ರಾಜ್ನ ಕರ್ಚನಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಆಶಿಶ್ ಅಲಿಯಾಸ್ ಅರವಿಂದ್ ಕುಮಾರ್ ಕೊಲೆಗೈದ ಪಾಪಿ. ರಾಜಕೇಶರ್ ಚೌಧರಿ ಕೊಲೆಗೀಡಾದ ಯುವತಿ. ರಾಜಕೇಶರಳನ್ನು ಪ್ರೀತಿಸಿದ್ದ ಅರವಿಂದ್, ಬೇರೊಂದು ಮದುವೆಯಾಗುತ್ತಿದ್ದ. ತಡೆಯಲು ಬಂದಿದ್ದಕ್ಕೆ ತನ್ನ 7 ವರ್ಷದ ಪ್ರೇಯಸಿ ರಾಜಕೇಶರಳನ್ನು ಕೊಲೆ ಮಾಡಿರುವುದಾಗಿ ತನಿಖೆಯಲ್ಲಿ ತಿಳಿದು ಬಂದಿದೆ. ಸದ್ಯ ಆರೋಪಿಯನ್ನು ಬಂಧಿಸಲಾಗಿದೆ ಎಂದು ಕರ್ಚನಾ ಪೊಲೀಸರು ತಿಳಿಸಿದ್ದಾರೆ.ಕೊಲೆಗೀಡಾದ ಯುವತಿ
15 ದಿನಗಳ ಹಿಂದೆ ಪ್ರೇಯಸಿಯ ಕತ್ತು ಹಿಸುಕಿ ಕೊಲೆ ಮಾಡಿದ ದುಷ್ಕರ್ಮಿ ಅರವಿಂದ, ಆಕೆಯ ದೇಹವನ್ನು ತನ್ನ ಮನೆಯ ಸಮೀಪದ ಸೆಪ್ಟಿಕ್ ವಾಟರ್ ಟ್ಯಾಂಕ್ನಲ್ಲಿ ಎಸೆದಿದ್ದ. ತನ್ನ ಮೇಲೆ ಅನುಮಾನ ಬರಬಾರದೆಂದು ಮೃತ ಯುವತಿಯ ಪೋಷಕರೊಂದಿಗೆ ಆಗಮಿಸಿ ರಾಜಕೇಶರ್ ಕಾಣೆಯಾಗಿರುವುದಾಗಿ ದೂರು ಕೂಡ ನೀಡಿದ್ದ. ಈ ಬಗ್ಗೆ ತನಿಖೆ ನಡೆಸಿದಾಗ ಅರವಿಂದ ಮೇಲೆ ಅನುಮಾನ ಬಂದಿತ್ತು. ವಿಚಾರಣೆ ನಡೆಸಿದಾಗ ಆರೋಪಿ ತಪ್ಪೊಪ್ಪಿಕೊಂಡಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.ಕೊಲೆ ಮಾಡಿದ ಪಾಪಿ ಪ್ರೇಮಿ
ಏಳು ವರ್ಷಗಳ ಪ್ರೀತಿಗೆ ಎಳ್ಳು-ನೀರು: ರಾಜಕೇಶರ್ ಚೌಧರಿ 7 ವರ್ಷಗಳ ಹಿಂದೆ ಅರವಿಂದ್ ಜೊತೆ ಸ್ನೇಹ ಬೆಳೆಸಿದ್ದಳು. ಸ್ನೇಹ ಪ್ರೀತಿಗೆ ತಿರುಗಿತ್ತು. ಬಳಿಕ ಹಲವು ದಿನಗಳ ಕಾಲ ಒಟ್ಟಿಗೆ ವಾಸಿಸಲು ಆರಂಭಿಸಿದ್ದರು. ಏಳು ವರ್ಷಗಳ ಕಾಲ ಅವರ ಸಂಬಂಧ ಚೆನ್ನಾಗಿಯೇ ಇತ್ತು. ಆದರೆ, ಇತ್ತೀಚೆಗೆ ಅರವಿಂದನ ಕುಟುಂಬಸ್ಥರು ಬೇರೊಂದು ಮದುವೆ ನಿಶ್ಚಯಿಸಿದ್ದರು. ಮೇ 28 ರಂದು ಆತನ ಮದುವೆ ಕೂಡ ನಿಶ್ಚಯ ಮಾಡಿದ್ದರು. ಆದರೆ, ಅರವಿಂದ ಬೇರೊಂದು ಮದುವೆ ಆಗುತ್ತಿದ್ದಾನೆಂಬ ಸುದ್ದಿ ಗೊತ್ತಾಗುತ್ತಿದ್ದಂತೆ ರಾಜಕೇಶರ್ ಈ ಮದುವೆಗೆ ವಿರೋಧ ವ್ಯಕ್ತಪಡಿಸಿದ್ದಳು. ಇದರಿಂದ ವಿಚಲಿತನಾದ ಅರವಿಂದ, ಬೇರೆ ದಾರಿ ಹೊಳೆಯದೇ ಇವಳಿಗೆ ಒಂದು ಗತಿ ಕಾಣಿಸುವ ನಿರ್ಧಾರಕ್ಕೆ ಬಂದಿದ್ದ.ಸೆಪ್ಟಿಕ್ ಟ್ಯಾಂಕ್
ಅಂದುಕೊಂಡಂತೆ ಮೇ 24 ರಂದು ನಿರ್ಮಾಣ ಹಂತದಲ್ಲಿರುವ ಮನೆಗೆ ಕರೆಸಿ ಕತ್ತು ಹಿಸುಕಿ ಕೊಂದು ಹಾಕಿದ್ದ. ಬಳಿಕ ಶವವನ್ನು ಸೆಪ್ಟಿಕ್ ಟ್ಯಾಂಕ್ಗೆ ಎಸೆದಿದ್ದ. ಬಳಿಕ ತನ್ನಿಷ್ಟದ ಮದುವೆ ಕೂಡ ಆಗಿದ್ದನು. ರಾಜಕೇಶರ್ ವಾರವಾದರೂ ಮನೆಗೆ ಬಾರದ್ದರಿಂದ ಆಕೆಯ ಪೋಷಕರು, ಕರ್ಚನಾ ಪೊಲೀಸ್ ಠಾಣೆಯಲ್ಲಿ ದೂರು ನೀಡಲು ನಿರ್ಧರಿಸಿದರು. ಅವರ ಜೊತೆ ಅರವಿಂದ್ ಕೂಡ ಆಗಮಿಸಿದ್ದನು. ಪ್ರಕರಣದ ವಿಚಾರಣೆ ವೇಳೆ ಅರವಿಂದನ ಕೈವಾಡ ಇರುವುದು ಗೊತ್ತಾಗಿತ್ತು. ಕರೆದು ಪೊಲೀಸ್ ಭಾಷೆಯಲ್ಲಿ ಕೇಳಿದಾಗ, ತನಗೆ ಅವಳನ್ನು ಮದುವೆಯಾಗಲು ಇಷ್ಟವಿರಲಿಲ್ಲ. ಹಾಗಾಗಿ ತಾನೇ ಕೊಂದಿರುವುದಾಗಿ ತಪ್ಪೊಪ್ಪಿಕೊಂಡಿದ್ದನು.
ಸೆಪ್ಟಿಕ್ ಟ್ಯಾಂಕ್ಗೆ ಸಿಮೆಂಟ್ ಪ್ಲಾಸ್ಟರ್: ಕೊಲೆ ಬಳಿಕ ಯಾರಿಗೂ ತಿಳಿಯದಂತೆ ಆಕೆಯ ಮೃತ ದೇಹವನ್ನು ಸೆಪ್ಟಿಕ್ ಟ್ಯಾಂಕ್ನಲ್ಲಿ ಎಸೆದ ಅರವಿಂದ, ಮೃತದೇಹದ ಮೇಲೆ ಮರಳು ಸುರಿದಿದ್ದ. ಆ ಬಳಿಕ ಸೆಪ್ಟಿಕ್ ಟ್ಯಾಂಕ್ಗೆ ಸಿಮೆಂಟ್ ಪ್ಲಾಸ್ಟರ್ ಕೂಡ ಹಾಕಿದ್ದನು ಎಂಬ ವಿಚಾರ ತನಿಖೆ ವೇಳೆ ತಿಳಿದು ಬಂದಿದೆ. ತಂದೆಯ ಮರಣದ ಬಳಿಕ ರಾಜಕೇಶರ್, ಕುಟುಂಬದ ಜವಾಬ್ದಾರಿ ಹೊತ್ತುಕೊಂಡಿದ್ದಳು. ಮನೆಯಲ್ಲೇ ಹೊಲಿಗೆ ಕಸೂತಿ ಕೇಂದ್ರ ತೆರೆದಿದ್ದ ಯುವತಿ ಚೌಧರಿ, ತನ್ನ ಸಂಪಾದನೆಯಲ್ಲಿ ತಂಗಿಯರಿಗೆ ಮದುವೆ ಕೂಡ ಮಾಡಿಸಿದ್ದಳು. ಅರವಿಂದ್ ಜೊತೆಗಿನ ಸಂಬಂಧ ಆಕೆಯ ಮನೆಯವರೆಗೂ ತಿಳಿದಿತ್ತು.