ಬೆಂಗಳೂರು: ರಾಜ್ಯ ಸರ್ಕಾರ ಬ್ರ್ಯಾಂಡ್ ಬೆಂಗಳೂರು ಮಾಡುವುದಾಗಿ ಹೇಳುತ್ತಿದೆ. ಆದರೆ, ರಾತ್ರಿ ಒಂದು ಗಂಟೆಯವರೆಗೆ ಬ್ಯಾಂಡ್ ಬಾರಿಸಲು ಅವಕಾಶ ಕಲ್ಪಿಸಿದ್ದಾರೆ. ಹೀಗಾಗಿ ಇದು ಬ್ರಾಂಡ್ ಬೆಂಗಳೂರು ಆಗುತ್ತದೊ, ಬ್ಯಾಂಡ್ ಬೆಂಗಳೂರು ಆಗುತ್ತದೊ ಗೊತ್ತಿಲ್ಲ. ಬೆಂಗಳೂರನ್ನು ಸ್ವಚ್ಚ ಬೆಂಗಳೂರನ್ನಾಗಿ ಮಾಡಿ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಬೊಮ್ಮಾಯಿ ಅವರು ನೆನ್ನೆ (ಆ.12) ಸೋಮಕ್ಷತ್ರಿಯ ಗಾಣಿಗ ಸಮುದಾಯದ ಶ್ರೀ ವೇಣುಗೋಪಾಲಕೃಷ್ಣ ಸಮುದಾಯ ಭವನ ಉದ್ಘಾಟನೆ ಮಾಡಿ ಮಾತನಾಡಿದರು.
ಗಾಣಿಗ ಸಮಾಜ ತನ್ನದೇ ಆದ ಇತಿಹಾಸ ಪರಂಪರೆ ಹೊಂದಿದೆ. ಚಿಂತನೆಯಲ್ಲಿ ಬಹಳ ಶ್ರೇಷ್ಠವಾಗಿದೆ. ವಿಜಯನಗರ ಕಾಲದಿಂದಲೂ ತನ್ನ ಶ್ರೇಷ್ಠತೆಯನ್ನು ಉಳಿಸಿಕೊಂಡು ಬಂದಿದೆ. ಯಾರಿಗೆ ಸ್ವಾಭಿಮಾನದ ಬದುಕು ಬದುಕಲು ಸಾಧ್ಯವಿಲ್ಲವೋ ಅವರಿಗೆ ಬದುಕು ಕಟ್ಟುವ ಕೆಲಸ ಮಾಡುವುದು ಮುಖ್ಯ. ಬಡತನದಿಂದ ಬಂದು ಬಡವರ ಪರವಾಗಿ ಕೆಲಸ ಮಾಡುವ ವ್ಯಕ್ತಿ ಪ್ರಧಾನಿ ನರೇಂದ್ರ ಮೋದಿಯವರು. ಅವರು ಗಾಣಿಗ ವೃತ್ತಿ ಮಾಡುತ್ತ ಬೆಳೆದವರು. ಅವರನ್ನು ನೋಡಿದಾಗ ಈ ಸಮಾಜದ ಶಕ್ತಿ ಎಷ್ಟಿದೆ ಅಂತ ಗೊತ್ತಾಗುತ್ತದೆ ಎಂದರು.
ಒಂದು ಕಾಲ ಇತ್ತು ಭೂಮಿ ಇದ್ದವರು ಜಗತ್ತು ಆಳುತ್ತಿದ್ದರು. ನಂತರ ಹಣ ಇದ್ದವರು ಜಗತ್ತು ಆಳುತ್ತಿದ್ದರು. ಈಗ 21 ನೇ ಶತಮಾನ ಇದು ಜ್ಞಾನದ ಯುಗ. ಜ್ಞಾನ ಎಲ್ಲಿದೆಯೋ ಅವರು ಜಗತ್ತನ್ನು ಆಳುತ್ತಾರೆ. ಅನೇಕ ವಿದೇಶಿಗರು ಭಾರತಕ್ಕೆ ಬಂದರೆ ಮೊದಲು ಬೆಂಗಳೂರಿಗೆ ಬರುತ್ತಾರೆ. ಅವರು ಬಂದು ವಿಧಾನ ಸೌಧಕ್ಕೆ ಬರುವುದಿಲ್ಲ. ಇನ್ಫೊಸಿಸ್ ಹಾಗೂ ವಿಪ್ರೋ ಕಡೆಗೆ ಹೋಗುತ್ತಾರೆ ಎಂದರು.
ಗಾಣಿಗ ಸಮಾಜ ಉತ್ತಮ ಐಕ್ಯೂ ಇರುವ ಸಮಾಜ, ಬುದ್ದಿವಂತರ ಸಮಾಜ. ಕಾರ್ಪೋರೇಷನ್ ಬ್ಯಾಂಕ್ ಅಧ್ಯಕ್ಷರಾಗಿದ್ದ ಅಣ್ಣಿಗೇರಿಯವರು ದೊಡ್ಡ ಬ್ಯಾಂಕ್ ನಡೆಸಿದರು.
ಈ ಸಮಾಜದ ಮಕ್ಕಳಲ್ಲಿ ಪ್ರತಿಭೆ ಇದೆ. ಈ ಕಟ್ಟಡ ಕಟ್ಟಿರುವುದು ಒಳ್ಳೆಯದು, ಇದರಿಂದ ಬರುವ ಆದಾಯ ನಿಮ್ಮ ಮಕ್ಕಳ ಬವಿಷ್ಯಕ್ಕೆ ಬಳಸಿಕೊಳ್ಳಿ, ಈ ಕಟ್ಟಡ ಕಟ್ಟಲು ಎಸ್. ಎಂ. ಕೃಷ್ಣ ಅವರು ಜಮೀನು ಕೊಟ್ಟಿದ್ದಕ್ಕೆ ಈ ಕಟ್ಟಡ ಕಟ್ಟಲು ಸಾಧ್ಯವಾಗಿದೆ. ಅವರಿಗೆ ಕೃತಜ್ಞತೆ ಸಲ್ಲಿಸುತ್ತೆನೆ ಎಂದರು.
ರಾಜರಾಜೇಶ್ವರಿ ನಗರ ಕ್ಷೇತ್ರದ ಶಾಸಕ ಮುನಿರತ್ನ ಅವರು ಜನೋಪಯೋಗಿ ಶಾಸಕರಾಗಿದ್ದಾರೆ. ಅವರು ಕೇಳಿದ ಕೆಲಸಗಳಿಗೆಲ್ಲ ಹಣ ಕೊಟ್ಟಿದ್ದೇನೆ. ಈ ಭಾಗದಲ್ಲಿ ರಸ್ತೆ ಮಾಡಲು ಮಾಲೀಕರು ಜಮೀನು ನೀಡಲು ನಿರಾಕರಿಸಿದಾಗ ಮುನಿರತ್ನ ಅವರು ತಮ್ಮ ಬಾಂಡ್ ಪೇಪರ್ ನಲ್ಲಿ ಸರ್ಕಾರದಿಂದ ಪರಿಹಾರ ಕೊಡಿಸುವುದಾಗಿ ಬರೆದು ಕೊಟ್ಟರು. ಮುನಿರತ್ನ ಅವರು ಕೊವಿಡ್ ಸಂದರ್ಭದಲ್ಲಿ ಜನರಿಗೆ ಮಾಡಿರುವ ಕೆಲಸದಿಂದ ಎಲ್ಲರಿಗೂ ಮಾದರಿಯಾಗಿದ್ದಾರೆ. ಮುನಿರತ್ನ ಅವರು ಕ್ಷೇತ್ರವನ್ನು ಸ್ವಚ್ಚವಾಗಿ ಇಟ್ಟುಕೊಂಡಿದ್ದಾರೆ ಎಂದರು.
ಉಡುಪಿ ಮಂಜುನಾಥ ಅವರು ಸಮಾಜದ ಮುಖಂಡರನ್ನು ಕರೆದುಕೊಂಡು ಬಂದು ಸಮುದಾಯ ಭವನ ನಿರ್ಮಾಣಕ್ಕೆ ಒಂದು ಕೋಟಿ ರೂ. ಕೇಳಿದರು. ನಾನು ನಿಮ್ಮ ಬೇಡಿಕೆಗೆ ಸ್ಪಂದಿಸಿದ್ದೇನೆ. ನೀವು ನನ್ನನ್ನು ಗೌರವಿಸಿದ್ದಕ್ಕೆ ಧನ್ಯವಾದಗಳು.
ಈ ಸಮಾಜ ದೇಶದ ಎಲ್ಲ ರಾಜ್ಯಗಳಲ್ಲಿ ಇದೆ. ಸಮಾಜ ಸಂಘಟಿತರಾಗಿ ಮುಂದೆ ಬರಬೇಕು. ನಾನು ನಿಮ್ಮ ಒಬ್ಬ ಸಹೋದರ ಅಂತ ತಿಳಿದುಕೊಳ್ಳಿ, ಅಧಿಕಾರ ಇರಲಿ ಬಿಡಲಿ ನೀವು ನಮಗೆ ದೊಡ್ಡ ಶಕ್ತಿ ಕೊಟ್ಟಿದ್ದೀರಿ, ಆ ಶಕ್ತಿಯಿಂದ ನಾವು ನಿಮ್ಮ ಪರವಾಗಿ ಕೆಲಸ ಮಾಡುತ್ತೇನೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಶಾಸಕ ಮುನಿರತ್ನ, ಮಾಜಿ ಸಭಾಪತಿ ವಿ.ಆರ್. ಸುದರ್ಶನ, ಬಿಜೆಪಿ ಯುವ ಮುಖಂಡ ಭರತ ಬೊಮ್ಮಾಯಿ, ಚನ್ನಮ್ಮ ಬಸವರಾಜ ಬೊಮ್ಮಾಯಿ, ಮಂಜುನಾಥ ಉಡುಪಿ ಸೇರಿದಂತೆ ಗಾಣಿಗ ಸಮುದಾಯದ ಮುಖಂಡರು ಹಾಜರಿದ್ದರು.