ಬೆಂಗಳೂರು : ಹೊಸ ವರ್ಷದ ಹೊಸ್ತಿಲಲ್ಲೇ, ಬಸ್ ದರ ಏರಿಕೆ ಮಾಡಿದ್ದ, ರಾಜ್ಯ ಸರ್ಕಾರದ ಪರಿಷ್ಕೃತ ದರ ಇಂದು ಮಧ್ಯರಾತ್ರಿಯಿಂದ ಜಾರಿಗೆ ಬಂದಿದೆ.
ಸಾರಿಗೆ ಇಲಾಖೆ ಕೆಎಸ್ಆರ್ಟಿಸಿ (KSRTC), ಬಿಎಂಟಿಸಿ (BMTC), ಎನ್ಡಬ್ಲೂಕೆಆರ್ಟಿಸಿ (NWKRTC), ಕೆಕೆಆರ್‌ಟಿಸಿ (KKRTC) ಬಸ್ಗಳ ಟಿಕೆಟ್ ದರ ಪರಿಷ್ಕರಣೆಗೊಳಿಸಿದ್ದು, ಶೇ 15 ರಷ್ಟು ದರ ಹೆಚ್ಚು ಮಾಡಿ ಆದೇಶ ಹೊರಡಿಸಿದೆ. ಪರಿಷ್ಕೃತ ದರ ಮಧ್ಯರಾತ್ರಿಯಿಂದಲೇ ಜಾರಿಯಾಗಿದ್ದು, ಬಸ್ ಪ್ರಯಾಣಿಕರಿಗೆ ಹೊಸ ಟಿಕೆಟ್ ದರದ ಬಿಸಿ ತಟ್ಟಿದೆ ಎಂದು ಹೇಳಲಾಗಿದೆ.
ಸಾರಿಗೆ ಇಲಾಖೆ ನೂತನ ದರಪಟ್ಟಿ ಬಿಡುಗಟೆ ಮಾಡಿದೆ. 50 ರಿಂದ 100 ರೂಪಾಯಿಯಷ್ಟು ಟಿಕೆಟ್ ದರ ಹೆಚ್ಚಳವಾಗಿದೆ. ಕೆಎಸ್ಆರ್ ಟಿಸಿ ಪಾಸ್ 150 ರಿಂದ 200 ರೂಪಾಯಿವರೆಗೆ ಹೆಚ್ವಳವಾಗಿದ್ದರೆ, ಬಿಎಂಟಿಸಿ ಪಾಸ್ ದರ 100 ರಿಂದ 150 ರೂಪಾಯಿವರೆಗೆ ಏರಿಕೆ ಆಗಿದೆ. ಬಸ್ ದರ ಏರಿಕೆಯ ನಿರ್ಧಾರಕ್ಕೆ ವಿಪಕ್ಷಗಳು, ಸಾರ್ವಜನಿಕರು ವಿರೋಧ ವ್ಯಕ್ತಪಡಿಸುತ್ತಿರುವ ನಡುವೆಯೇ ಸರ್ಕಾರ ಕೊನೆಗೂ ಬಸ್ ಪ್ರಯಾಣ ದರ ಏರಿಕೆ ಮಾಡಿದೆ.
ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಾಲ್ಕೂ ನಿಗಮಗಳಲ್ಲಿ ಉತ್ತಮ ಬಸ್ ಸೇವೆ ನೀಡುವುದು ಸೇರಿ ಆರ್ಥಿಕ ಪರಿಸ್ಥಿತಿ ಸುಧಾರಿಸಲು ಕಳೆದ ಕೆಲ ತಿಂಗಳ ಹಿಂದೆಯೇ ಪ್ರಯಾಣ ದರ ಏರಿಕೆ ಪ್ರಸ್ತಾವ ಸಲ್ಲಿಕೆಯಾಗಿತ್ತು. ಕೆಎಸ್ಸಾರ್ಟಿಸಿ, ಎನ್‌ಡಬ್ಲ್ಯುಕೆಆರ್‌ಟಿಸಿ ಮತ್ತು ಕೆಕೆಆರ್‌ಟಿಸಿ ಶೇ.33ರಷ್ಟು ಹಾಗೂ ಬಿಎಂಟಿಸಿ ಪ್ರಯಾಣ ದರ ಶೇ.42ರಷ್ಟು ಹೆಚ್ಚಳಕ್ಕೆ ಅನುಮತಿ ನೀಡಲು ಕೋರಿದ್ದವು. ಆದರೆ, ಅದರಲ್ಲಿ ಶೇ.15ರಷ್ಟು ಬಸ್ ಪ್ರಯಾಣ ದರಕ್ಕೆ ಅನುಮತಿಸಲಾಗಿದೆ ಎಂದು ಸರ್ಕಾರದ ಆದೇಶದಲ್ಲಿ ತಿಳಿಸಲಾಗಿದೆ.
ಈ ವೇಗದೂತ ಸಾರಿಗೆಗೆ ರಾಜ್ಯದಲ್ಲಿ ಟಿಕೆಟ್ ದರ 7 ರೂ.ಗಳಿಂದ 115 ರೂಪಾಯಿ ವರೆಗೆ ಹೆಚ್ಚಳವಾಗಿದ್ದು. ಬೀದರ್ ನಿಂದ ಬೆಂಗಳೂರಿಗೆ ಬರಬೇಕಾದರೆ 115 ರೂಪಾಯಿ ಹೆಚ್ಚಿಗೆ ನೀಡಬೇಕು. ಕಲಬುರಗಿಯಿಂದ ಬೆಂಗಳೂರಿಗೆ ಬರಬೇಕಾದರೆ 99 ರೂಪಾಯಿ ಹೆಚ್ಚು ನೀಡಬೇಕಿದೆ. ರಾಮನಗರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯ ಜನರು ಅತ್ಯಂತ ಕನಿಷ್ಠ ಕ್ರಮವಾಗಿ 7 ರೂ. ಹಾಗೂ 9 ರೂ. ಹೆಚ್ಚಿಗೆ ನೀಡಬೇಕಾಗುತ್ತದೆ ಎಂದು ಮಾಹಿತಿ ಲಭ್ಯವಾಗಿದೆ.