ಬೆಂಗಳೂರು : ಮಕರ ಸಂಕ್ರಾಂತಿಯ ಉತ್ತರಾಯಣ ಪುಣ್ಯ ಕಾಲದಲ್ಲಿ ಅದ್ಭುತ ಕ್ಷಣಕ್ಕೆ ಇಂದು ಬೆಂಗಳೂರಿನ ಐತಿಹಾಸಿಕ ಗವಿಗಂಗಾಧರೇಶ್ವರನ ಸನ್ನಿಧಿ ಸಾಕ್ಷಿಯಾಗಲಿದೆ. ಗಂಗಾಧರನಿಗೆ ಭಾಸ್ಕರ ನಮಿಸುವ ಸೂರ್ಯರಶ್ಮಿಯ ವಿಸ್ಮಯದ ಕ್ಷಣ ಇಂದು ನಡೆಯಲಿದೆ.
ಈ ಹಿನ್ನೆಲೆಯಲ್ಲಿ ಸಂಜೆ ಹೊತ್ತಿಗೆ ನೇಸರನ ಕಿರಣ ಗವಿಗಂಗಾಧರೇಶ್ವರ ದೇಗುಲದ ಬಲಭಾಗದ ಕಿಂಡಿಯಿಂದ ದೇವಸ್ಥಾನದೊಳಗೆ ಪ್ರವೇಶಿಸಲಿದೆ. ಸೂರ್ಯನ ರಶ್ಮಿ ಮೊದಲು ಗವಿಗಂಗಾಧರೇಶ್ವರನ ಪಾದ ಸ್ಪರ್ಶಿಸಲಿದೆ. ಬಳಿಕ ನಂದಿ ವಿಗ್ರಹದ ಮೂಲಕ ಸೂರ್ಯನ ಕಿರಣ ಹಾದು ಶಿವಲಿಂಗವನ್ನು ಸ್ಪರ್ಶಿಸಲಿದೆ. ಈ ಚಮತ್ಕಾರವನ್ನು ಕಣ್ತುಂಬಿಕೊಳ್ಳಲು ದೇವಸ್ಥಾನಕ್ಕೆ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಗವಿಗಂಗಾಧರೇಶ್ವರ ದೇಗುಲದಲ್ಲಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಈ ವೇಳೆ ಸಂಜೆ ದೇಗುಲದ ಬಲಭಾಗದಲ್ಲಿರುವ ಕಿಂಡಿಯ ಮೂಲಕ ಪ್ರವೇಶಿಸುವ ಸೂರ್ಯ ರಶ್ಮಿ ಬಳಿಕ ನಂದಿಯ ಕೊಂಬುಗಳ ಮೂಲಕ ಹಾದು ಗವಿಯೊಳಗಿರುವ ಶಿವಲಿಂಗವನ್ನು ಸ್ಪರ್ಶಿಸಲಿದೆ. ಈ ಭಾಸ್ಕರ ವಿಸ್ಮಯ ಇಂದು ನಡೆಯಲಿದೆ. ಸಂಜೆ 5:15 ರಿಂದ 5:17 ರ ವರೆಗೆ ಈ ಕೌತುಕ ನಡೆಯಲಿದೆ.
ನಂತರ, ಸಂಜೆ 4 ಗಂಟೆಗೆ ದೇವಸ್ಥಾನದ ಬಾಗಿಲು ತೆರೆಯಲಾಗುತ್ತದೆ. ಈ ವೇಳೆ ಸರಳವಾಗಿ ಪೂಜೆ ನೆರವೇರುತ್ತದೆ. ಬಳಿಕ ಸೂರ್ಯ ರಶ್ಮಿ ಸ್ಪರ್ಶಿಸುವ ಸಮಯದಲ್ಲಿ ಅಭಿಷೇಕ ಪ್ರಿಯನಿಗೆ ರುದ್ರಾಭಿಷೇಕ ಮಾಡಲಾಗುತ್ತದೆ. ಸಂಜೆ 6 ಗಂಟೆಯವರೆಗೆ ಭಕ್ತರಿಗೆ ದರ್ಶನಕ್ಕೆ ಅವಕಾಶವಿರುತ್ತದೆ. ಸೂರ್ಯ ರಶ್ಮಿ ಸ್ಪರ್ಶಿಸುವ ದೃಶ್ಯವನ್ನು ವೀಕ್ಷಿಸಲು ದೇವಾಲಯದ ಹೊರ ಭಾಗದಲ್ಲಿ ಎಲ್‌ಇಡಿ ಪರದೆಗಳನ್ನು ಹಾಕಲಾಗಿದೆ.
ಈ ಕ್ಷಣವನ್ನು ಕಣ್ತುಂಬಿಕೊಳ್ಳಲು ಭಕ್ತರು ಕಾತರದಿಂದ ಕಾಯುತ್ತಿದ್ದು, ದೇಗುಲದ ಅವರಣದಲ್ಲಿ ಎಲ್‌ಇಡಿ ವ್ಯವಸ್ಥೆ ಮಾಡಲಾಗಿದೆ. ಪ್ರತಿ ವರ್ಷ ಈ ಸುಂದರ ವಿದ್ಯಮಾನಕ್ಕೆ ದೇವಸ್ಥಾನ ಸಾಕ್ಷಿಯಾಗುತ್ತದೆ. ಭಕ್ತರ ಕೌತುಕ ವಿಸ್ಮಯವನ್ನು ಕಣ್ತುಂಬಿಸಿಕೊಳ್ಳುವ ಕಾತುರ ಅದೇ ರೀತಿ ಇರಲಿದೆ ಎನ್ನಲಾಗಿದೆ.