ICCW Enabled UPI App: ಈಗ ಕಾರ್ಡ್ ಇಲ್ಲದೆಯೂ ಎಟಿಎಂನಿಂದ ಕ್ಯಾಷ್ ಪಡೆಯಬಹುದು. ಐಸಿಸಿಡಬ್ಲ್ಯೂ ಎಂಬ ತಂತ್ರಜ್ಞಾನವನ್ನು ಅನಾವರಣಗೊಳಿಸಲಾಗಿದೆ. ಇದರಲ್ಲಿ ನಾವು ಯುಪಿಐ ಆ್ಯಪ್ ಮೂಲಕ ಎಟಿಎಂನಲ್ಲಿ ಕ್ಯಾಷ್ ಪಡೆಯಲು ಸಾಧ್ಯವಾಗುತ್ತದೆ.
ತಂತ್ರಜ್ಞಾನ ಬೆಳೆದಂತೆಲ್ಲಾ ಹೊಸ ಹೊಸ ಆವಿಷ್ಕಾರಗಳು ನಡೆಯುತ್ತಲೇ ಇರುತ್ತವೆ. ಎಟಿಎಂ, ಯುಪಿಐ ಬಂದ ಬಳಿಕ ಬ್ಯಾಂಕಿಂಗ್ ವ್ಯವಸ್ಥೆ ಬಹಳ ಸುಗಮಗೊಂಡಿದೆ. ಎಟಿಎಂನಲ್ಲಿ ಕ್ಯಾಷ್ ಪಡೆಯುವುದರಿಂದ ಹಿಡಿದು ಸ್ಟೇಟ್ಮೆಂಟ್ವರೆಗೆ ಹಲವು ಕಾರ್ಯಗಳನ್ನು ಮಾಡಬಹುದು. ನಮಗೆ ಕ್ಯಾಷ್ ಹಣ ಬೇಕೆಂದರೆ ಬ್ಯಾಂಕಿಗೆ ಹೋಗಿ ನಮ್ಮ ಖಾತೆಯಿಂದ ಹಣ ವಿತ್ಡ್ರಾ ಮಾಡುತ್ತೇವೆ. ಇಲ್ಲವಾದರೆ ಎಟಿಎಂನಲ್ಲಿ ಕ್ಯಾಷ್ ಪಡೆಯುತ್ತೇವೆ. ಎಟಿಎಂನಲ್ಲಿ ಕ್ಯಾಷ್ ಪಡೆಯಲು ಕಾರ್ಡ್ ಬೇಕು. ಆದರೆ, ಈಗ ಕಾರ್ಡ್ ಇಲ್ಲದೆಯೂ ಎಟಿಎಂನಿಂದ ಕ್ಯಾಷ್ ಪಡೆಯಬಹುದು. ಐಸಿಸಿಡಬ್ಲ್ಯೂ ಅಥವಾ ಇಂಟರಾಪರಬಲ್ ಕಾರ್ಡ್ಲೆಸ್ ಕ್ಯಾಷ್ ವಿತ್ಡ್ರಾಯಲ್ (ICCW- Interoperable Cardless Cash Withdrawal) ಎಂಬ ತಂತ್ರಜ್ಞಾನವನ್ನು ಅನಾವರಣಗೊಳಿಸಲಾಗಿದೆ. ಇದರಲ್ಲಿ ನಾವು ಯುಪಿಐ ಆ್ಯಪ್ ಮೂಲಕ ಎಟಿಎಂನಲ್ಲಿ ಕ್ಯಾಷ್ ಪಡೆಯಲು ಸಾಧ್ಯವಾಗುತ್ತದೆ.
ದಿನಕ್ಕೆ ಗರಿಷ್ಠ 10,000 ರೂ ಮಾತ್ರ ಪಡೆಯಲು ಸಾಧ್ಯ
ಯುಪಿಐ ಮೂಲಕ ಎಟಿಎಂನಲ್ಲಿ ದಿನಕ್ಕೆ ಎರಡು ಬಾರಿ ಮಾತ್ರ ಕ್ಯಾಷ್ ಡ್ರಾ ಮಾಡಬಹುದು. ಒಮ್ಮೆಗೆ ಗರಿಷ್ಠ 5,000 ರೂವರೆಗೂ ಮಾತ್ರ ಹಣ ಪಡೆಯಬಹುದು. ಅಂದರೆ ದಿನಕ್ಕೆ 10,000 ರೂಗಿಂತ ಹೆಚ್ಚು ಹಣ ವಿತ್ಡ್ರಾಗೆ ಸದ್ಯಕ್ಕೆ ಅವಕಾಶ ಇಲ್ಲ.
ಐಸಿಸಿಡಬ್ಲ್ಯೂ ಅನ್ನು ಸದ್ಯಕ್ಕೆ ಬ್ಯಾಂಕ್ ಆಫ್ ಬರೋಡಾ ಮಾತ್ರ ಅಳವಡಿಸಿದೆ. ಉಳಿದ ಬ್ಯಾಂಕುಗಳು ಮುಂದಿನ ದಿನಗಳಲ್ಲಿ ಇದರ ಬಳಕೆ ಮಾಡಬಹುದು. ಹೀಗಾಗಿ, ಬ್ಯಾಂಕ್ ಆಫ್ ಬರೋಡಾದ ಎಟಿಎಂಗಳಲ್ಲಿ ಮಾತ್ರ ಯುಪಿಐ ಮೂಲಕ ಕ್ಯಾಷ್ ವಿತ್ಡ್ರಾ ಮಾಡಲು ಸದ್ಯಕ್ಕೆ ಸಾಧ್ಯವಿದೆ. ಹಾಗಂತ ಬ್ಯಾಂಕ್ ಆಫ್ ಬರೋಡಾದ ಖಾತೆದಾರರಿಗೆ ಮಾತ್ರವೇ ಈ ಸೇವೆ ಸೀಮಿತ ಅಲ್ಲ. ಯಾವುದೇ ಬ್ಯಾಂಕ್ನ ಗ್ರಾಹಕರು ಬಿಒಬಿ ಎಟಿಎಂಗೆ ಹೋಗಿ ಯುಪಿಐ ಮೂಲಕ ಕಾರ್ಡ್ ಹಾಕದೆಯೇ ಕ್ಯಾಷ್ ಡ್ರಾ ಮಾಡಿಕೊಂಡು ಬರಬಹುದು.
ಯುಪಿಐ ಆ್ಯಪ್ಗಳಲ್ಲಿ ಐಸಿಸಿಡಬ್ಲ್ಯೂ ಎನೇಬಲ್ ಆಗಿರಬೇಕು
ಇಲ್ಲಿ ಗ್ರಾಹಕರು ಭೀಮ್ ಯುಪಿಐ, ಬ್ಯಾಂಕ್ ಆಫ್ ಬರೋಡಾದ ವರ್ಲ್ಡ್ ಯುಪಿಐ, ಪೇಟಿಎಂ, ಫೋನ್ಪೇ ಅಥವಾ ಬೇರೆ ಯಾವುದಾದರೂ ಯುಪಿಐ ಆ್ಯಪ್ಗಳನ್ನು ತಮ್ಮ ಮೊಬೈಲ್ಗಳಲ್ಲಿ ಹೊಂದಿರಬೇಕು. ಅದರಲ್ಲಿ ಐಸಿಸಿಡಬ್ಲ್ಯೂ ಅನ್ನು ಎನೇಬಲ್ ಮಾಡಿರಬೇಕು. ಆಗ ಮಾತ್ರ ಎಟಿಎಂಗೆ ಹೋಗಿ ಯುಪಿಐ ಮೂಲಕ ಕ್ಯಾಷ್ ವಿತ್ಡ್ರಾ ಮಾಡಬಹುದು.
ಎಟಿಎಂನಲ್ಲಿ ಯುಪಿಐ ಬಳಸಿ ಹಣ ಡ್ರಾ ಮಾಡುವ ವಿಧಾನ
- ಬ್ಯಾಂಕ್ ಅಫ್ ಬರೋಡಾದ ಯಾವುದಾದರೂ ಎಟಿಎಂ ಸೆಂಟರ್ಗೆ ಹೋಗಿ
- ಯುಪಿಐ ಕ್ಯಾಷ್ ವಿತ್ಡ್ರಾಯಲ್ ಅನ್ನು ಅಯ್ಕೆ ಮಾಡಿ
- ನೀವು ವಿತ್ಡ್ರಾ ಮಾಡಬೇಕೆಂದಿರುವ ಮೊತ್ತವನ್ನು ನಮೂದಿಸಿ
- ಎಟಿಎಂ ಪರದೆ ಮೇಲೆ ಕ್ಯೂಆರ್ ಕೋಡ್ ಕಾಣಿಸುತ್ತದೆ.
- ಐಸಿಸಿಡಬ್ಲ್ಯೂ ಎನೇಬಲ್ ಆಗಿರುವ ಯುಪಿಐ ಆ್ಯಪ್ ತೆರೆದು ಈ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿರಿ.
- ಆ್ಯಪ್ನಲ್ಲಿ ಯುಪಿಐ ಪಿನ್ ಹಾಕಿದರೆ ಎಟಿಎಂನಲ್ಲಿ ಹಣ ಬರುತ್ತದೆ.
ಆಗಲೇ ಹೇಳಿದಂತೆ ಈ ರೀತಿ ಯುಪಿಐ ಮೂಲಕ ನೀವು ಎಟಿಎಂನಲ್ಲಿ ಒಂದು ಸಲಕ್ಕೆ 5,000 ರೂಗಿಂತ ಹೆಚ್ಚು ಹಣ ವಿತ್ಡ್ರಾ ಮಾಡಲು ಆಗುವುದಿಲ್ಲ. ನಿಮ್ಮ ಕೈಯಲ್ಲಿ ಎಟಿಎಂ ಕಾರ್ಡ್ ಇಲ್ಲದಿದ್ದಾಗ ಈ ಸೌಲಭ್ಯ ಬಹಳ ಸಹಾಯಕ್ಕೆ ಬರುತ್ತದೆ.