ನವದೆಹಲಿ : ಇಂದು ನಾಡಿನೆಲ್ಲೆಡೆ ಕ್ರಿಸ್ ಮಸ್ ಧರ್ಮೀಯರ ಪವಿತ್ರ ಹಬ್ಬ ಕ್ರಿಸ್ ಮಸ್ ಆಚರಣೆ ಸಂಭ್ರಮವಾಗಿದೆ. ವಿಶ್ವಕ್ಕೆ ಶಾಂತಿ ಮತ್ತು ಸತ್ಯದ ಸಂದೇಶ ಸಾರಿದ ಯೇಸು ಕ್ರಿಸ್ತ ಜನಿಸಿದ ದಿನವನ್ನು ಕ್ರಿಸ್‌ಮಸ್ ಹಬ್ಬವನ್ನಾಗಿ ಡಿ.25 ರಂದು ಆಚರಿಸಲಾಗುತ್ತದೆ.
ಈ ಹಬ್ಬದ ದಿನ ಸಾಂತಾ ಕ್ಲಾಸ್ ವೇಷ ಧರಿಸಿಕೊಂಡು ಪರಸ್ಪರ ಕ್ರಿಸ್ಮಸ್ ಕಾರ್ಡ್, ಉಡುಗೊರೆ ನೀಡುವುದು, ಸಿಹಿ ತಿಂಡಿಗಳನ್ನು ಹಂಚುವುದು ಹಾಗೂ ಚರ್ಚ್ಗೆ ಹೋಗಿ ವಿಶೇಷವಾಗಿ ಪಾರ್ಥನೆ ಸಲ್ಲಿಸುವ ಮೂಲಕ ಹಬ್ಬವನ್ನು ಅದ್ದೂರಿಯಾಗಿ ಆಚರಿಸಲಾಗುತ್ತದೆ.
ಕ್ರಿಸ್ ಮಸ್ ಕ್ರೈಸ್ತರಿಗೆ ಬಹುದೊಡ್ಡ ಧಾರ್ಮಿಕ ಮತ್ತು ಸಾಂಸ್ಕೃತಿಕ ಆಚರಣೆಯಾಗಿದ್ದು, ಪ್ರೀತಿ, ತ್ಯಾಗ ಮತ್ತು ಸಹಾನುಭೂತಿಯ ಬೋಧನೆಗಳಿಗೆ ಪೂಜ್ಯನೀಯವಾದ ಯೇಸು ಕ್ರಿಸ್ತನ ಜನನದ ದಿನವಾಗಿದೆ. ಈ ಸಂದರ್ಭದಲ್ಲಿ ಧಾರ್ಮಿಕ ಸೇವೆ, ಪ್ರಾರ್ಥನೆಗಳನ್ನು ಮಾಡಿ ಕ್ಯಾರಲ್ ಗಾಯನ ಹಾಡಲಾಗುತ್ತದೆ. ಈ ಹಬ್ಬವನ್ನು ಕ್ರಿಶ್ಚಿಯನ್ ಧರ್ಮಿಯರು ಮಾತ್ರವಲ್ಲದೇ ಪ್ರಪಂಚದಾದ್ಯಂತ ಎಲ್ಲಾ ಜನರು ಈ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸುವುದು ವಿಶೇಷವಾಗಿದೆ.
ದೆಹಲಿಯ ಸಿಬಿಸಿಐ ಕೇಂದ್ರದಲ್ಲಿ ಆಯೋಜಿಸಿರುವ ಕ್ರಿಸ್ ಮಸ್ ಆಚರಣೆಯಲ್ಲಿ ಪ್ರಧಾನಿ ಭಾಗವಹಿಸಲಿದ್ದಾರೆ. ದೇಶದ ಕ್ಯಾಥೊಲಿಕ್ ಚರ್ಚ್ಗಳ ಪ್ರಧಾನ ಕಚೇರಿಯಲ್ಲಿ ನಡೆಯಲಿರುವ ಕ್ರಿಸ್ಮಸ್ ಹಬ್ಬದ ಕಾರ್ಯಕ್ರಮದಲ್ಲಿ ಪ್ರಧಾನಿಯೊಬ್ಬರು ಭಾಗವಹಿಸುತ್ತಿರುವುದು ಇದೇ ಮೊದಲು. ನಿಮ್ಮೆಲ್ಲರಿಗೂ ಕ್ರಿಸ್ಮಸ್ ಹಬ್ಬದ ಶುಭಾಶಯಗಳು, ಲಾರ್ಡ್ ಜೀಸಸ್ ಕ್ರೈಸ್ಟ್ ಅವರ ಬೋಧನೆಗಳು ಎಲ್ಲರಿಗೂ ಶಾಂತಿ ಮತ್ತು ಸಮೃದ್ಧಿಯ ಮಾರ್ಗವನ್ನು ತೋರಿಸಲಿ ಎಂದು ಪ್ರಧಾನಿ ಮೋದಿ ಟ್ವೀಟ್ ಮೂಲಕ ತಿಳಿಸಿದ್ದಾರೆ.