ಬೆಳಗಾವಿಯಲ್ಲಿ ತಮ್ಮನ್ನು ಅಕ್ರಮವಾಗಿ ಬಂಧಿಸಿ ಕೆಟ್ಟದಾಗಿ ನಡೆಸಿಕೊಂಡಿರುವ ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ವಿಧಾನಪರಿಷತ್ ಸದಸ್ಯ ಸಿಟಿ ರವಿ ರಾಜ್ಯಪಾಲರಿಗೆ ಮನವಿ ಸಲ್ಲಿಸಿದ್ದಾರೆ.
ಸದನದಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬಗ್ಗೆ ಅಸಭ್ಯ ಶಬ್ದಗಳನ್ನು ಸಿಟಿ ರವಿ ಪ್ರಯೋಗಿಸಿದ್ದ ಆರೋಪದ ಹಿನ್ನೆಲೆಯಲ್ಲಿ ಅವರ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣ ದಾಖಲಾಗಿತ್ತು. ಈ ಬೆನ್ನಲ್ಲೇ ಬೆಳಗಾವಿ ಪೊಲೀಸರು ಅವರನ್ನು ಬಂಧಿಸಿದ್ದರು. ಪೊಲೀಸ್ ಕಸ್ಟಡಿಯಲ್ಲಿ ತಮ್ಮನ್ನು ಕೆಟ್ಟದಾಗಿ ನಡೆಸಿಕೊಳ್ಳಲಾಗಿದೆ ಎಂದು ಆರೋಪಿಸಿರುವ ಸಿಟಿ ರವಿ, ತಮಗೆ ತಕ್ಷಣವೇ ಹೆಚ್ಚುವರಿ ಭದ್ರತೆ ಒದಗಿಸಬೇಕು ಎಂದು ಮನವಿ ಮಾಡಿದ್ದಾರೆ.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ರವಿ, ಪರಿಷತ್ತಿನ ಒಳಗಡೆಯೇ ಘಟನೆ ನಡೆದಿದ್ದು, ಪರಿಷತ್ತಿನ ಎಲ್ಲಾ ಅಧಿಕಾರಗಳು ಪರಿಷತ್ತಿನ ಅಧ್ಯಕ್ಷ ಬಸವರಾಜ ಹೊರಟ್ಟಿ ಅವರಿಗೆ ಇರುವುದರಿಂದ ಅವರ ಒಪ್ಪಿಗೆ ಪಡೆಯಬೇಕಿತ್ತು. ಸಭಾಧ್ಯಕ್ಷರ ಒಪ್ಪಿಗೆ ಪಡೆಯದೇ ಪ್ರಕರಣ ದಾಖಲಿಸಿರುವುದು ಪೊಲೀಸರು ಎಸಗಿದ ತಪ್ಪಾಗಿದೆ, ಯಾವುದೇ ಸಾಕ್ಷ್ಯಾಧಾರಗಳಿಲ್ಲದೆ ಬಂಧಿಸಲಾಗಿದೆ ಎಂದೂ ಸಿಟಿ ರವಿ ಆರೋಪಿಸಿದ್ದಾರೆ.
“ಪೊಲೀಸ್ ಜೀಪಿನಲ್ಲಿ ನನಗೆ ರಕ್ತಸ್ರಾವ ಆಗಿರುವ (ತಲೆಗೆ ಗಾಯ) ಬಗ್ಗೆ ಪೊಲೀಸರು ಎಂದಿಗೂ ಕಾಳಜಿ ವಹಿಸಲಿಲ್ಲ, ದೀರ್ಘಕಾಲದವರೆಗೆ ಪ್ರಥಮ ಚಿಕಿತ್ಸೆ ಮತ್ತು ವೈದ್ಯಕೀಯ ಚಿಕಿತ್ಸೆ ನೀಡಲಿಲ್ಲ. ಅವರು ನನ್ನನ್ನು ಬಹಳ ಗಂಟೆಗಳ ಕಾಲ ಆಹಾರ ಮತ್ತು ನೀರಿಲ್ಲದೆ ಹಸಿವಿನಿಂದ ಬಳಲುವಂತೆ ಮಾಡಿದರು, ನನ್ನನ್ನು ಪ್ರಾಣಿಯಂತೆ ನಡೆಸಿಕೊಂಡರು, ಭಯಾನಕ ಚಿತ್ರಹಿಂಸೆ ನೀಡಿದರು, ಮಾನಸಿಕ ಮತ್ತು ದೈಹಿಕವಾಗಿ ಕಿರುಕುಳ ನೀಡಿದರು, ”ಎಂದು ಅವರು ಪತ್ರದಲ್ಲಿ ಬರೆದಿದ್ದಾರೆ.
ಪೊಲೀಸರು ತಮ್ಮನ್ನು ಹತ್ಯೆ ಮಾಡಲು ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡಿದ್ದಾರೆ ಎಂದು ಆರೋಪಿಸಿರುವ ರವಿ, ಇಡೀ ಈ ಘಟನೆಯ ಬಗ್ಗೆ ಪೊಲೀಸ್ ಮಹಾನಿರ್ದೇಶಕರಿಂದ ಸ್ಪಷ್ಟನೆ ಪಡೆಯುವಂತೆ ರಾಜ್ಯಪಾಲರಿಗೆ ಮನವಿ ಮಾಡಿದ್ದಾರೆ.