ಬೆಂಗಳೂರು : ಮೊಟ್ಟೆ ದಾಳಿ ಬಳಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿರುವ ಬಿಜೆಪಿ ಶಾಸಕ ಮುನಿರತ್ನ ಅವರ ನಿವಾಸಕ್ಕೆ ಪರಿಷತ್ ಸದಸ್ಯ ಸಿ.ಟಿ ರವಿ ಅವರು ಭೇಟಿ ನೀಡಿ, ಆರೋಗ್ಯ ವಿಚಾರಿಸಿದ್ದಾರೆ.
ಭೇಟಿ ಬಳಿಕ ಮಾತನಾಡಿದ ಸಿ.ಟಿ ರವಿ, ಪ್ರಜಾಸತ್ತಾತ್ಮಕ ರೀತಿಯಲ್ಲಿ ಆಯ್ಕೆಯಾಗಿರುವ ಶಾಸಕ ಮುನಿರತ್ನ ಅವರ ಮೇಲೆ ನಡೆದ ಹಲ್ಲೆ ದುರದೃಷ್ಟಕರವಾಗಿದೆ. ಯಾರೇ ತಪ್ಪು ಮಾಡಿದರೂ ಕಾನೂನಿನ ಮೂಲಕ ಅದನ್ನು ಎದುರಿಸಬೇಕು. ಬದಲಾಗಿ ಅವರ ಮೇಲೆ ಹಲ್ಲೆ ನಡೆಸುವುದು ಸರಿಯಲ್ಲ. ಗಾಂಧಿಗಿರಿ ನೆನಪಿಸಿಕೊಳ್ಳುವ ಸಮಯದಲ್ಲಿ ಗೂಂಡಾಗಿರಿ ಮಾಡುತ್ತಿದ್ದಾರೆ. ರಾಜ್ಯವನ್ನು ಗೂಂಡಾ ರಾಜ್ಯ ಮಾಡಲು ಹೊರಟಿದ್ದಾರೆಂದು ಕಿಡಿಕಾರಿದರು.
ಅಧಿಕಾರ ದುರುಪಯೋಗ ಆಗಿರೋದು ಅಂಗೈ ನಲ್ಲಿ ಇರೋ ಹುಣ್ಣಿನಂತೆ. ನನ್ನನ್ನ ಬಂಧಿಸಿದ್ದು ಯಾವ ಹಿನ್ನೆಲೆಯಲ್ಲಿ? ಅದರ ಪರಮಾಧಿಕಾರ ಇರೋದು ನಮ್ಮ ಸಭಾಪತಿ ಅವರಿಗೆ. ಸಭಾಪತಿಗಳು ರೂಲಿಂಗ್ ಕೊಟ್ಟ ಬಳಿಕವೂ ಕಾನೂನು ಉಲ್ಲಂಘನೆ ಆಗಿದೆ. ನನ್ನನ್ನು ಬಂಧನ ಮಾಡಿ ಅಮಾನವೀಯ ವರ್ತನೆ ಮಾಡಿದ್ದಾರೆ. ಆದರೆ. ಬೆನ್ನು ತೋರಿಸಿ ಓಡೋಗುವ ಅಭ್ಯಾಸ ನನಗಿಲ್ಲ. ತಪ್ಪು ಮಾಡಿದವರಿಗೆ ಶಿಕ್ಷೆ ಆಗಬೇಕು. ತುರ್ತು ಪರಿಸ್ಥಿತಿಯನ್ನು ದೇಶದ ಮೇಲೆ ಹೇರಿದ್ದ ಇಂದಿರಾ ಗಾಂಧಿ ಅವರ ಪರಿಸ್ಥಿತಿ ಏನಾಯ್ತು ಎಂದು ಪ್ರಶ್ನಿಸಿದರು.
ಶಾಸಕ ಮುನಿರತ್ನ ಮಾತನಾಡಿ, ಘಟನೆ ನಡೆದಾಗ ಸಿ ಟಿ ರವಿ ದೂರವಾಣಿ ಕರೆ ಮಾಡಿ ವಿಚಾರಿಸಿದರು. ನಿಮ್ಮ ಜೊತೆ ನಾವಿದ್ದೇವೆ, ಎಲ್ಲಾ ವಿಷಯವನ್ನ ದೆಹಲಿಗೆ ತಲುಪಿಸಿದ್ದೇನೆ ಎಂದಿದ್ದರು. ಒಬ್ಬ ಶಾಸಕನ ಹಕ್ಕನ್ನ ಕಸಿಯಲಾಗುತ್ತಿದೆ. ಕ್ಷೇತ್ರಕ್ಕೆ ಹೋಗಬಾರದು ಎಂದು ಹೀಗೆ ಮಾಡುತ್ತಿದ್ದಾರೆ. ಡಿ ಕೆ ಶಿವಕುಮಾರ್ ಕೂಡ ಜೈಲಿಗೆ ಹೋಗಿ ಬಂದಿದ್ದಾರೆ. ಅವರಿಗೆ ಕ್ಷೇತ್ರಕ್ಕೆ ಹೋಗಲು ಅವಕಾಶ ಇದೆ, ಆದರೆ ನಾನು ಕ್ಷೇತ್ರಕ್ಕೆ ಹೋಗದಂತೆ ತಡೆಯುತ್ತಿದ್ದಾರೆ ಎಂದು ಆರೋಪ ಮಾಡಿದರು.
ಶಾಸಕಾರಗಲೇ ಬೇಕು ಎಂದುಕೊಂಡಿರುವ ಕಸುಮಾಗೆ ಒಂದು ಮಾತು ಹೇಳುತ್ತೇನೆ. ವಿದ್ಯಾವಂತರಿದ್ದೀರೆಂದು ಹೇಳ್ಕೊಂಡಿದ್ದೀರಿ, ಆದರೆ ಇಂತದಕ್ಕೆಲ್ಲ ಪ್ರಚೋದನೆ ಕೊಡಬೇಡಿ. ನಮ್ಮ ಕ್ಷೇತ್ರಕ್ಕೆ ಒಳ್ಳೆಯದಾಗಲು ನೋಡಿಕೊಳ್ಳಿ. ನಿಮ್ಮ ಮಾತನ್ನ ಎಲ್ಲರೂ ಕೇಳುತ್ತಾರೆ, ವರ್ಗಾವಣೆ ಲೆಟರ್ ಕೂಡ ನೀವು ಕೋಡುತ್ತೀರಿ. ಡಿಕೆ ಶಿವಕುಮಾರ್ ಮತ್ತು ಡಿ.ಕೆ ಸುರೇಶ್ ನಿಮ್ಮ ಮಾತು ಕೇಳುತ್ತಾರೆ. ಕ್ಷೇತ್ರದ ಅಭಿವೃದ್ಧಿಗೆ ಸಹಕರಿಸಿ, ಅದನ್ನ ಬಿಟ್ಟು ಮುನಿರತ್ನ ಮೇಲೆ ದಾಳಿ ಮಾಡಲು, ಚಪ್ಪಲಿ ಹಾರ ಹಾಕೋದಕ್ಕೆ, ಪೋಸ್ಟ್‌ರ್ ಹರಿಯೋದಕ್ಕೆ ಪ್ರೋತ್ಸಾಹ ಕೊಡಬೇಡಿ ಎಂದರು.