ಬೆಂಗಳೂರು : ಮೈಸೂರು ರಾಜಮನೆತನ ಮತ್ತು ರಾಜ್ಯ ಸರ್ಕಾ ರದ ನಡುವಿನ ಜಟಾಪಟಿ ಮತ್ತೊಂದು ಹಂತಕ್ಕೆ ತಲುಪಿದೆ. ಅರಮನೆ ಭೂಮಿಗೆ ಟಿಡಿಆರ್ ನೀಡುವ ವಿಚಾರದಲ್ಲಿ ತಿಕ್ಕಾಟ ನಡೆದಿದೆ.
ಅರಮನೆ ಮತ್ತು ಸರ್ಕಾರದ ನಡುವಿನ ಕಾನೂನು ಸಮರ ಹಿನ್ನೆಲೆ ಸಿಎಂ ಸಿದ್ದರಾಮಯ್ಯ ಇಂದು ಮಧ್ಯಾಹ್ನ 3 ಗಂಟೆಗೆ ತುರ್ತು ಸಂಪುಟ ಸಭೆ ಕರೆದಿದ್ದಾರೆ. ತುರ್ತು ಸಂಪುಟ ಸಭೆ ಕರೆದಿರುವುದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.
ಅರಮನೆ ಭೂಮಿಗೆ ಟಿಡಿಆರ್ ನೀಡುವ ವಿಚಾರದಲ್ಲಿ ರಾಜಮನೆತನ ಮತ್ತು ರಾಜ್ಯ ಸರ್ಕಾರದ ನಡುವಿನ ತಿಕ್ಕಾಟ ನಡೆಯುತ್ತಿದೆ. ಸುಪ್ರೀಂಕೋರ್ಟ್‌ನಲ್ಲಿ ಅಫಿಡವಿಟ್ ಸಲ್ಲಿಸಬೇಕಾದ ಹಿನ್ನೆಲೆ ಸರ್ಕಾರ ಸಂಪುಟ ಸಭೆಯಲ್ಲಿ ನಿರ್ಣಯ ಮಾಡಬೇಕಿದೆ. ಹೀಗಾಗಿ ಸಿಎಂ ಸಿದ್ದರಾಮಯ್ಯ ಇಂದು ಸಂಪುಟ ಸಭೆ ಕರೆದಿದ್ದಾರೆ.
ನಾಳೆಯ ಸಂಪುಟ ಸಭೆಯಲ್ಲಿ ಭೂಸ್ವಾಧೀನ ಪ್ರಕ್ರಿಯೆಯನ್ನು ಸರ್ಕಾರ ಕೈಬಿಡುವ ಸಾಧ್ಯತೆ ಇದೆ. ರಸ್ತೆ ಅಗಲೀಕರಣ ಮಾಡದೇ ಇರಲು ಸರ್ಕಾರ ತೀರ್ಮಾನಿಸಿದ್ದು, ಟಿಡಿಆರ್ ನೀಡಿದರೆ ಮುಂದಿನ ಭೂಸ್ವಾಧೀನ ಪ್ರಕ್ರಿಯೆಗಳಿಗೆ ಮಾನದಂಡ ಆಗುವ ಆತಂಕ ಎದುರಾಗಿದೆ.
ಟಿಡಿಆರ್ ಪರಿಹಾರ ನೀಡಲು ವಿಳಂಬ ಮಾಡಿದ ರಾಜ್ಯ ಸರ್ಕಾರದ ವಿರುದ್ಧ ಮೈಸೂರು ರಾಜಮನೆತನ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿತ್ತು. ಇಡೀ ಭೂಸ್ವಾಧೀನ ಪ್ರಕ್ರಿಯೆ ಕೈಬಿಡಲು ಸರ್ಕಾರದ ನಿರ್ಧಾರವಾಗಿದ್ದು, ನಾಳೆಯ ತುರ್ತು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಂಡು ಸುಪ್ರೀಂಕೋರ್ಟ್‌ನಲ್ಲಿ ಅಫಿಡವಿಟ್ ಸಲ್ಲಿಸಲು ಸರ್ಕಾರ ತೀರ್ಮಾನ ಮಾಡಿದೆ.