ಬೆಂಗಳೂರು : ಸಿದ್ದರಾಮಯ್ಯನವರು ಸಿಎಂ ಆದ ಬಳಿಕ ರಾಜ್ಯ ಸರ್ಕಾರವು ಆತ್ಮಹತ್ಯೆ ಭಾಗ್ಯವನ್ನು ಕರ್ನಾಟಕ ರಾಜ್ಯಕ್ಕೆ ದಯಪಾಲಿಸಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಕಿಡಿಕಾರಿದ್ದಾರೆ.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಮಾತನಾಡಿದ ಅವರು, ಬೀದರ್ ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣ ಉಲ್ಲೇಖಿಸಿದರು. ರಾಜ್ಯದ ಕಾಂಗ್ರೆಸ್ ಸರ್ಕಾರದ ಆಡಳಿತಾವಧಿಯಲ್ಲಿ ಸರ್ಕಾರಿ ಪ್ರಾಯೋಜಿತ ಆತ್ಮಹತ್ಯೆಗಳು ಅಥವಾ ರಾಜ್ಯ ಸರ್ಕಾರದ ಕುಮ್ಮಕ್ಕಿನ ಆತ್ಮಹತ್ಯೆ ಪ್ರಕರಣಗಳು ದಿನೇದಿನೇ ಹೆಚ್ಚಾಗುತ್ತಿದೆ. ಸರ್ಕಾರ, ಸಚಿವರು, ಆಡಳಿತ ಪಕ್ಷದ ಶಾಸಕರ ಕುಮ್ಮಕ್ಕಿನಿಂದ ಹಿಂದೆಂದೂ ಇಂಥ ಸರಣಿ ಆತ್ಮಹತ್ಯೆ ಪ್ರಕರಣಗಳನ್ನು ಕೇಳಿರಲಿಲ್ಲ, ನೋಡಿರಲಿಲ್ಲ ಎಂದು ವಿಶ್ಲೇಷಿಸಿದರು.
ಕಲಬುರಗಿ ಜಿಲ್ಲೆಯಲ್ಲಿ ಅನೇಕ ಆತ್ಮಹತ್ಯೆ, ಕೊಲೆ ಪ್ರಕರಣಗಳು ನಡೆದಿವೆ. ಅವನ್ನು ಮುಚ್ಚಿ ಹಾಕಿದ ಷಡ್ಯಂತ್ರ ಹಿಂದೆ ಆಗಿದೆ. ಕಾಂಗ್ರೆಸ್ಸಿನವರು ಹಗಲು ಅಂಥ ಕುಟುಂಬದವರನ್ನು ಭೇಟಿ ಮಾಡಿಲ್ಲ. ಬೆಳಗ್ಗಿನ ಜಾವ 3 ಗಂಟೆಗೆ ಭೇಟಿ ಕೊಟ್ಟಿದ್ದಾರೆ. ಕುಟುಂಬಕ್ಕೆ ಸಮಾಧಾನ ಹೇಳಿ, ಸಮಾಧಾನಿತರಾಗದೆ ಇದ್ದರೆ ಬೆದರಿಕೆ ಹಾಕುತ್ತಾರೆ. ಗುಲ್ಬರ್ಗದ ಪೊಲೀಸ್ ಇಲಾಖೆ ಖರ್ಗೆ ಮತ್ತು ಕುಟುಂಬದ ಮುಷ್ಟಿಯೊಳಗಿದೆ ಎಂದು ಆರೋಪಿಸಿದರು.