ವಾಲ್ಮೀಕಿ ಅಭಿವೃದ್ಧಿ ನಿಗಮಕ್ಕೆ ಹೆಚ್ಚುವರಿ ಅನುದಾನ ಬಿಡುಗಡೆ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ವಿಧಾನಸೌಧದಲ್ಲಿ ತಮ್ಮನ್ನು ಭೇಟಿ ಮಾಡಿದ ರಾಜನಹಳ್ಳಿ ಮಹರ್ಷಿ ವಾಲ್ಮೀಕಿ ಪೀಠದ ಪ್ರಸನ್ನಾನಂದ ಮಹಾಸ್ವಾಮಿಗಳು ಮತ್ತು ಸಚಿವ ಸತೀಶ್ ಜಾರಕಿಹೊಳಿ ನೇತೃತ್ವದ ಶಾಸಕರ ಮತ್ತು ಸಮುದಾಯದ ಮುಖಂಡರ ನಿಯೋಗದ ಬೇಡಿಕೆಗೆ ಸಿಎಂ ಸ್ಪಂದಿಸಿ ಹೆಚ್ಚುವರಿ ಅನುದಾನ ಬಿಡುಗಡೆಗೊಳಿಸಲು ಸ್ಥಳದಲ್ಲೇ ಅಧಿಕಾರಿಗಳಿಗೆ ಸೂಚನೆ ನೀಡಿದರು.

ವಾಲ್ಮೀಕಿ ನಿಗಮಕ್ಕೆ ಈ ಹಿಂದೆ ನೀಡಲಾಗಿದ್ದ 84.63 ಕೋಟಿ ಅನುದಾನದಲ್ಲಿ 50 ಕೋಟಿಯನ್ನು ಎಸ್ ಐ ಟಿ ಅಧಿಕಾರಿಗಳು ಬ್ಯಾಂಕ್ ಖಾತೆಯಲ್ಲೇ ಫ್ರೀಜ್ ಮಾಡಿಟ್ಟಿದ್ದಾರೆ. ಪ್ರಕರಣದ ತನಿಖೆ ಮುಂದುವರೆದಿದ್ದು ಬೇರೆ ಬೇರೆ ಖಾತೆಗಳಿಗೆ ವರ್ಗಾವಣೆ ಆಗಿರುವ ಸುಮಾರು 30 ಕೋಟಿಯಷ್ಟು ಹಣವನ್ನು ವಾಪಾಸ್ ವಶಕ್ಕೆ ಪಡೆಯುವ ಪ್ರಯತ್ನ ಮುಂದುವರೆದಿದೆ. ಸದ್ಯದಲ್ಲೇ ಪೂರ್ತಿ ಹಣವನ್ನು ವಾಪಾಸ್ ವಶಕ್ಕೆ ಪಡೆಯುವ ಸಾಧ್ಯತೆಗಳಿವೆ.

ಅಲ್ಲಿಯವರೆಗೂ ವಾಲ್ಮೀಕಿ ಸಮುದಾಯದ ಅಭಿವೃದ್ಧಿ ಕೆಲಸಗಳಿಗೆ ತೊಂದರೆ ಆಗಬಾರದು ಎನ್ನುವ ಉದ್ದೇಶದಿಂದ ನಿಗಮಕ್ಕೆ ತಕ್ಷಣವೇ ಹೆಚ್ಚುವರಿ ಅನುದಾನ ಬಿಡುಗಡೆಗೆ ಸೂಚನೆ ನೀಡಿದರು.

ಪ್ರಕರಣ ಪೂರ್ತಿ ಇತ್ಯರ್ಥ ಆಗುವವರೆಗೂ ನಿಗಮದ ಮತ್ತು ಸಮುದಾಯದ ಕೆಲಸಗಳಿಗೆ ತೊಂದರೆ ಆಗಬಾರದು ಎನ್ನುವುದು ನಮ್ಮ ಆಧ್ಯತೆಯಾಗಿದೆ. ಹೀಗಾಗಿ ಹಣ ಬಿಡುಗಡೆ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಮುಖ್ಯಮಂತ್ರಿಗಳು ನಿಯೋಗಕ್ಕೆ ಸ್ಪಷ್ಟಪಡಿಸಿದರು.

ಶಾಸಕರಾದ ಕಂಪ್ಲಿ ಗಣೇಶ್, ರಘುಮೂರ್ತಿ, ಕೋನರೆಡ್ಡಿ, ಸಮುದಾಯದ ಮುಖಂಡರಾದ ನಿವೃತ್ತ KAS ಅಧಿಕಾರಿ ಮೃತ್ಯುಂಜಯಪ್ಪ ಸೇರಿ ಸಮಾಜದ ಹಲವು ಹಿರಿಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *