ಬೆಂಗಳೂರು : ಎಸ್​ಸಿ ಹಾಗೂ ಎಸ್​ಟಿ ಸಮುದಾಯಗಳ ಗುತ್ತಿಗೆದಾರರಿಗೆ ಸರ್ಕಾರದ 2 ಕೋಟಿ ರೂ. ವರೆಗಿನ ಕಾಮಗಾರಿಗಳಲ್ಲಿ ಗುತ್ತಿಗೆ ಮೀಸಲಾತಿ ನೀಡುವುದಾಗಿ ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ. 2025-26ನೇ ಸಾಲಿನ ಬಜೆಟ್ ಮಂಡನೆ ಮಾಡಿದ ಅವರು ಈ ಘೋಷಣೆ ಮಾಡಿದರು.

ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮದನ್ವಯ ಎರಡು ಕೋಟಿ ರೂ. ಮೊತ್ತದವರೆಗಿನ ಕಾಮಗಾರಿಗಳಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳ ಪ್ರವರ್ಗ-1, 2ಎ ಮತ್ತು 2ಬಿ ಗುತ್ತಿಗೆದಾರರಿಗೆ ಮೀಸಲಾತಿ ಒದಗಿಸಲಾಗುವುದು ಎಂದು ತಿಳಿಸಿದರು.

ಕರ್ನಾಟಕ ಅನುಸೂಚಿತ ಉಪಯೋಜನೆ ಮತ್ತು ಬುಡಕಟ್ಟು ಉಪಯೋಜನೆಯಡಿಯಲ್ಲಿ 2025-26ನೇ ಸಾಲಿನಲ್ಲಿ ಪರಿಶಿಷ್ಟ ಜಾತಿ ಉಪಯೋಜನೆಗೆ 29,992 ಕೋಟಿ ರೂ. ಹಾಗೂ ಬುಡಕಟ್ಟುಉಪಯೋಜನೆಗೆ 12,026 ಕೋಟಿ ರೂ.ಗಳೂ ಸೇರಿದಂತೆ ಒಟ್ಟಾರೆ 42,018 ಕೋಟಿ ರೂ. ಅನುದಾನವನ್ನು ಒದಗಿಸಲಾಗಿದೆ.

ರಾಜ್ಯದಲ್ಲಿನ ಪರಿಶಿಷ್ಟ ಪಂಗಡ ಕಾಲೋನಿಗಳಲ್ಲಿ ಅಗತ್ಯ ಮೂಲಸೌಕರ್ಯ ಕಲಿಸಲು ಪ್ರಗತಿ ಕಾಲೋನಿ ಯೋಜನೆಯಡಿ 2024-25 ನೇ ಸಾಲಿನಲ್ಲಿ 559 ಕೋಟಿ ರೂ. ವೆಚ್ಚದ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಮಂಜೂರಾತಿ ನೀಡಲಾಗಿರುತ್ತದೆ ಎಂದು ಬಜೆಟ್​​ನಲ್ಲಿ ಉಲ್ಲೇಖಿಸಲಾಗಿದೆ.

ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದವರ ಮೇಲಿನ ದೌರ್ಜನ್ಯ ತಡೆಗಾಗಿ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ವ್ಯಾಪ್ತಿಯಲ್ಲಿ 33 ವಿಶೇಷ ಪೊಲೀಸ್ ಠಾಣೆಗಳನ್ನು ಪ್ರಾರಂಭಿಸಲಾಗಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಪ್ರತಿ ಜಿಲ್ಲೆಗೆ ಒಂದರಂತೆ ಒಟ್ಟು 31 ವಸತಿ ಶಾಲೆಗಳನ್ನು ಪಿ.ಯು ಕಾಲೇಜನ್ನಾಗಿ ಉನ್ನತೀಕರಿಸಲಾಗುವುದು ಎಂದು ಘೋಷಣೆ ಮಾಡಲಾಗಿದೆ.

ವಸತಿ ಶಾಲೆಗಳಿಲ್ಲದ ಹೋಬಳಿಗಳಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ 26 ಹೊಸ ವಸತಿ ಪ್ರಾರಂಭಿಸಲಾಗುವುದು. ಪರಿಶಿಷ್ಟ ಜಾತಿಯ 40, ಪರಿಶಿಷ್ಟ ಪಂಗಡದ ಏಳು ಮತ್ತು ಹಿಂದುಳಿದ ವರ್ಗಗಳ 14 ವಸತಿ ಶಾಲೆಗಳು ಸೇರಿದಂತೆ ನಿವೇಶನ ಲಭ್ಯವಿರುವ ಒಟ್ಟು 61 ಕ್ರೈಸ್ ವಸತಿ ಶಾಲೆಗಳಿಗೆ 1.292 ಕೋಟಿ ರೂ. ವೆಚ್ಚದಲ್ಲಿ ಸ್ವಂತ ಕಟ್ಟಡಗಳನ್ನು ನಿರ್ಮಿಸಲಾಗುವುದು ಎಂದು ಸಿದ್ದರಾಮಯ್ಯ ಘೋಷಿಸಿದರು.

Leave a Reply

Your email address will not be published. Required fields are marked *