ಬೆಂಗಳೂರು : ವೃಷಭಾವತಿ ನದಿಯಲ್ಲಿ ಕೊಳಚೆ ನೀರು ಹರಿಯುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಸಮಗ್ರ ಯೋಜನೆ ರೂಪಿಸುವಂತೆ ಜಲಮಂಡಳಿ ಅಧಿಕಾರಿಗಳಿಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಇಂದು ಸೂಚನೆ ನೀಡಿದೆ. ವೃಷಭಾವತಿ ನದಿ ಪುನಶ್ಚೇತನಕ್ಕೆ ಸಂಬಂಧಿಸಿದಂತೆ ಇಂದು ನಡೆದ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಸಮಸ್ಯೆಯನ್ನು ಪರಿಣಾಮಕಾರಿಯಾಗಿ ನಿಭಾಯಿಸುವಂತೆ ಪಾಲಿಕೆ, ಜಲಮಂಡಳಿ, ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳಿಗೆ ಸೂಚಿಸಿದರು.

ವೃಷಭಾವತಿ ನದಿಗೆ ಎಲ್ಲೆಲ್ಲಿ ಕೊಳಚೆ ನೀರು ಬರುತ್ತಿದೆ ಎಂಬುದನ್ನು ಪರಿಶೀಲಿಸಿ ಪಟ್ಟಿ ಮಾಡಬೇಕು. ನದಿ ಬದಿಯಲ್ಲಿರುವ ಅಪಾರ್ಟ್​ಮೆಂಟ್​ಗಳಿಂದ ಕೊಳಚೆ ನೀರು ಹರಿಯುತ್ತಿರುವ ಕುರಿತು ಪರಿಶೀಲಿಸಬೇಕು. ಅಪಾರ್ಟ್​ಮೆಂಟ್​ಗಳಲ್ಲಿ ಅಳವಡಿಸಿರುವ ತ್ಯಾಜ್ಯನಿರು ಸಂಸ್ಕರಣಾ ಘಟಕಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿವೆ ಎಂಬುದನ್ನು ಪರಿಶೀಲಿಸಬೇಕು. ಪಾಲಿಕೆ, ಜಲಮಂಡಳಿ,ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಪರಸ್ಪರ ಸಮನ್ವಯ ಸಾಧಿಸಿಕೊಂಡು ಸಮಗ್ರ ಯೋಜನೆ ರೂಪಿಸಬೇಕು.

ಜಲಮಂಡಳಿಯಿಂದ ಎಷ್ಟು ಎಸ್​ಟಿಪಿಗಳು ಕಾರ್ಯನಿರ್ವಹಿಸುತ್ತಿವೆ. ಹೊಸ ಎಸ್​ಟಿಪಿಗಳ ನಿರ್ಮಾಣ ಸಂಬಂಧ ಯಾವ ರೀತಿಯಲ್ಲಿ ಯೋಜನೆ ರೂಪಿಸಲಾಗುತ್ತಿದೆ ಎಂಬುದರ ಬಗ್ಗೆ ವಿವರವಾದ ಮಾಹಿತಿ ನೀಡಬೇಕು. ಕೊಳಚೆ ನೀರು ನದಿಗೆ ಸೇರುತ್ತಿರುವುದನ್ನು ಗುರುತಿಸಿ ಅದನ್ನು ಪೈಪ್​ ಮೂಲಕ ಎಸ್​ಟಿಪಿಗೆ ಹೋಗುವ ವ್ಯವಸ್ಥೆ ಮಾಡಬೇಕೆಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.

ವೃಷಭಾವತಿ ನದಿಗೆ ಹೊಂದಿಕೊಂಡಂತೆ 42 ಕೆರೆಗಳು ಬರಲಿದ್ದು, ಒತ್ತುವರಿಯಾಗಿರುವ ಪ್ರದೇಶವನ್ನು ಗುರುತಿಸಬೇಕು. ಜಿಲ್ಲಾಧಿಕಾರಿಗಳ ಬಳಿ ಬಾಕಿಯಿರುವ ಪ್ರಕರಣಗಳ ಪೈಕಿ ಭೂಮಾಪಕರಿಂದ ಸಮೀಕ್ಷೆ ನಡೆಸಿ, ಒತ್ತುವರಿ ತೆರವು ಕಾರ್ಯಾಚರಣೆಯನ್ನು ನಡೆಸಬೇಕು. ವೃಷಭಾವತಿ ನದಿಗೆ ಕಸ ಹಾಕದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಅಗತ್ಯವಿರುವ ಕಡೆ ಫೆನ್ಸಿಂಗ್ ಅಳವಡಿಸುವ ಕೆಲಸ ಮಾಡಬೇಕು. ಜೆಸಿಬಿಗಳನ್ನು ಇಟ್ಟು ಹೂಳೆತ್ತುವ ಕಾರ್ಯವನ್ನು ನಡೆಸಬೇಕು. ವೃಷಭಾವತಿ ವ್ಯಾಲಿಯಲ್ಲಿ ಸಂಪೂರ್ಣವಾಗಿ ಹೂಳೆತ್ತಿ ನೀರು ಸರಾಗವಾಗಿ ಹರಿದು ಹೋಗುವಂತೆ ಮಾಡಬೇಕು ಎಂದು ಸೂಚನೆ ನೀಡಿದರು.

ಈ ವೇಳೆ ಅರಣ್ಯ, ಪರಿಸರ ಹಾಗೂ ಹವಾಮಾನ ವೈಪರೀತ್ಯ ವಿಭಾಗದ ವಿಶೇಷ ಆಯುಕ್ತರಾದ ಶ್ರೀಮತಿ ಪ್ರೀತಿ ಗೆಹ್ಲೋಟ್, ವಲಯ ಆಯುಕ್ತರಾದ ಶ್ರೀಮತಿ ರಮ್ಯ, ಪ್ರಧಾನ ಅಭಿಯಂತರರಾದ ಪ್ರಹ್ಲಾದ್, ಮುಖ್ಯ ಅಭಿಯಂತರರು, ವಿಜಯ್ ಕುಮಾರ್ ಹರಿದಾಸ್, ಪಾಲಿಕೆ, ಜಲಮಂಡಳಿ, ಮಾಲಿನ್ಯ ನಿಯಂತ್ರಣ ಮಂಡಳಿ ಸೇರಿದಂತೆ ಇನ್ನಿತರೆ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *