ಬೆಂಗಳೂರು : ಸಂಸತ್ ಅಧಿವೇಶನದಲ್ಲಿ ನಾನು ಅಮಿತ್ ಶಾ ಅವರ ಭಾಷಣ ಕೇಳಿದ್ದೇನೆ. ಕೇಂದ್ರ ಗೃಹ ಸಚಿವರ ಭಾಷಣ ತಿರುಚಿ ಅಪಪ್ರಚಾರ ಮಾಡುತ್ತಿದ್ದಾರೆಂದು ಕಾಂಗ್ರೆಸ್ ವಿರುದ್ಧ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ವಾಗ್ದಾಳಿ ನಡೆಸಿದ್ದಾರೆ.

ನಾಡಪ್ರಭು ಕೆಂಪೇಗೌಡ ಜನಪರ ವೇದಿಕೆ ವತಿಯಿಂದ ಅಟಲ್ ಬಿಹಾರಿ ವಾಜಪೇಯಿ ಜನ್ಮ ಶತಮಾನೋತ್ಸವ ಹಿನ್ನೆಲೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೋಂಡು ಮಾತನಾಡಿದ ಹೆಚ್‌ಡಿಡಿ, ಪ್ರಜಾಪ್ರಭುತ್ವದ ಹೆಸರಲ್ಲಿ ಕಾಂಗ್ರೆಸ್ ಹೇಗೆ ನಡೆದುಕೊಳ್ಳುತ್ತಿದೆ ಎಂದರೆ ದೇಶದ ಜನರು ತಲೆ ತಗ್ಗಿಸುವಂತೆ ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

ಅಟಲ್ ಜೀ ವಿರೋಧ ಪಕ್ಷದಲ್ಲಿ ಇದ್ದಾಗ ನಾನು ಅವರ ಭಾಷಣ ಕಾರಿನಲ್ಲಿ ಹೋಗುವಾಗ ಕೇಳುತ್ತಿದೆ. ಅಟಲ್ ಜೀ ಭಾಷಣ ಕೇಳಿ, ನಾನು ವಿರೋಧ ಪಕ್ಷ ನಾಯಕನಾದಾಗ ಹೇಗೆ ಮಾತನಾಡಬೇಕು ಎಂದು ತಿಳಿದುಕೊಳ್ಳುತ್ತಿದ್ದೇನೆ ಎಂದರು.

ಎಲ್ಲ ರಾಜ್ಯಗಳಲ್ಲಿ ಸುಶಾಸನ ದಿನಾಚರಣೆ ನಡೀತಾ ಇದೆ. ಅನಾರೋಗ್ಯ ಕಾರಣ ಕಾರ್ಯಕ್ರಮಕ್ಕೆ ಬರಲು ಆಗಲ್ಲ ಎಂದಿದ್ದೆ. ಅಟಲ್ ಅವರ ಹೆಸರಲ್ಲಿ ನಡೆಯುವ ಕಾರ್ಯಕ್ರಮ ತಪ್ಪಿಸಿಕೊಳ್ಳಬಾರದು. ಪ್ರಜಾಪ್ರಭುತ್ವ, ಅಂಬೇಡ್ಕರ್ ಹಾಗೂ ಕಾಂಗ್ರೆಸ್ ಬಗ್ಗೆ ಮಾತಾಡಿದ್ದಾರೆ. ಅನಾವಶ್ಯಕವಾಗಿ ಬಿಜೆಪಿ ಬಗ್ಗೆ ಟೀಕೆ ಮಾಡುತ್ತಾರೆ. ವಾಜಪೇಯಿ ಅವರ ಕೊಡುಗೆ ಬಗ್ಗೆ ಎಳೆಎಳೆಯಾಗಿ ಹೇಳಿದ್ದಾರೆ. ನಾನು ಆಳುವ ಪಕ್ಷದಲ್ಲಿದ್ದೆ, ವಾಜಪೇಯಿ ವಿಪಕ್ಷ ನಾಯಕ ಎಂದು ಮೆಲುಕು ಹಾಕಿದರು.

ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಮಾತುಗಳನ್ನು ಮೆಚ್ಚಿಕೊಂಡ ದೇವೇಗೌಡ, ಸಂತೋಷ್ ಅವರು ಯಾವುದೇ ಅಧಿಕಾರಕ್ಕೆ ಆಸೆಪಟ್ಟವರಲ್ಲ. ಕೇಂದ್ರ, ರಾಜ್ಯದಲ್ಲಿ ಮಂತ್ರಿ ಆಗಬೇಕು ಎಂದು ಆಸೆಪಟ್ಟವರಲ್ಲ. ನಿಸ್ವಾರ್ಥದಿಂದ ಪಕ್ಷ ಕಟ್ಟುತ್ತಿದ್ದಾರೆ. ಮೊದಲ ಬಾರಿಗೆ ನಿಮ್ಮ ಭಾಷಣ ಕೇಳಿದ್ದೇನೆ. ಪ್ರಜಾಪ್ರಭುತ್ವದ ಬಗ್ಗೆ, ಮೋದಿ, ಶಾ ಅವರ ಬಗ್ಗೆ ಎದುರಾಳಿಗಳು ಮಾತನಾಡುತ್ತಾರೆ. ಅವರ ಮಾತು ಪೊಳ್ಳು. ಅದಕ್ಕೆ ಬೆಲೆ ಇಲ್ಲ ಎನ್ನುವುದನ್ನು ಜನರ ಮನ ಮುಟ್ಟುವಂತೆ ಮಾತಾಡಿದ್ದೀರಿ. ಮೊದಲ ಬಾರಿಗೆ ನಿಮ್ಮ ಜೊತೆ ನಾನು ವೇದಿಕೆ ಹಂಚಿಕೊಂಡಿದ್ದೇನೆ. ನಿಮ್ಮಲ್ಲಿ ಏನು ಶಕ್ತಿ ಇದೆ ಎಂದು ಅರ್ಥ ಮಾಡಿಕೊಂಡಿದ್ದೇನೆ ಎಂದು ಹೇಳಿದರು.

Leave a Reply

Your email address will not be published. Required fields are marked *