Congress Guarantee scheme: ರಾಜ್ಯಕ್ಕೆ ಅಕ್ಕಿ ಕೊಡದ ವಿಚಾರ : ಕೇಂದ್ರದ ನಡೆಯ ಹಿಂದೆ ದುರುದ್ದೇಶ ಇದೆ ಎಂದ ಸಚಿವ ಪ್ರಿಯಾಂಕ್ ಖರ್ಗೆ
ಪುಕ್ಕಟೆ ಬೇಡ, ಹಣ ಕೊಡ್ತೀವಿ ಅಂದ್ರೂ ಅಕ್ಕಿ ಕೊಡಲು ಕೇಂದ್ರ ಸರ್ಕಾರ ಹಿಂಜಿರಿತೀದೆ ಎಂದು ಪ್ರಿಯಾಂಕ್ ಖರ್ಗೆ ದೂರಿದ್ದಾರೆ.
ಬೆಂಗಳೂರು: ಕೇಂದ್ರದ ನಡೆಯ ಹಿಂದೆ ದುರುದ್ದೇಶ ಇದೆ. ದುಡ್ಡುಕೊಟ್ಟು ಅಕ್ಕಿ ಖರೀದಿ ಮಾಡ್ತೀವಿ ಎಂದು ಹೇಳಿದ್ರು, ಒಪ್ಪದಿರಲು ಕಾರಣವೇನು?
ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಐಟಿಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ. ವಿಧಾನಸೌಧದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಇದಕ್ಕೆ ಕೇಂದ್ರ ಸರ್ಕಾರ ಮತ್ತು ಬಿಜೆಪಿಯ ನಾಯಕರೇ ಉತ್ತರ ಕೊಡಬೇಕು. ಬಡವರಿಗೆ ಹಾಗೂ ದುಡಿಯುವ ಕೈಗಳನ್ನು ಚೆನ್ನಾಗಿ ನೋಡಿಕೊಳ್ಳುತ್ತೇವೆ ಎಂದಾಗ, ಇದಕ್ಕೆ ಕೇಂದ್ರ ಸರ್ಕಾರ ಏಕೆ ಅಡ್ಡಗಾಲು ಹಾಕುತ್ತಿದೆ. ಮುಂಗಾರು ವಿಳಂಬದ ನೆಪ ಸರಿಯಲ್ಲ. ಅಕ್ಕಿ ದಾಸ್ತಾನು ಇಲ್ಲವೇ? ಕೇಳಿದ್ದಾರೆ.
ದುರುದ್ದೇಶದಿಂದ ಕೇಂದ್ರ ಸರ್ಕಾರ ಹೀಗೆ ಮಾಡ್ತಿದೆ. ಮೊದಲು ಆಹಾರ ಧಾನ್ಯ ಖರೀದಿ ಮಾಡಲು FCI ಗೆ ಹೋಗಬೇಕು. ದುಡ್ಡು ಕೊಟ್ಟರು ಕೊಡಲ್ಲ ಅಂದ್ರೆ ಯಾಕೆ ಅಂತ ಕೇಂದ್ರ ಸರ್ಕಾರ ಹೇಳಬೇಕು. ನಾವು ಸುಮ್ಮನೆ ಕುಳಿತುಕೊಳ್ಳಲ್ಲ, ಬೇರೆ ರಾಜ್ಯದಿಂದ ಖಾಸಗಿ ಆಗಿ ತೆಗೆದುಕೊಂಡು ಬರುತ್ತೇವೆ ಎಂದು ಹೇಳಿದರು. ಬಿಜೆಪಿ ನಾಯಕರಾದ ಸಿ.ಟಿ ರವಿ ಹಾಗೂ ಆರ್. ಅಶೋಕ್ ಕೇಂದ್ರದ ಮುಂದೆ ಮಾತಾಡುವ ರೂಢಿಯಿಲ್ಲ. ಪುಕ್ಕಟ್ಟೆ ಅಕ್ಕಿ ಕೊಡಿ ಅಂತ ಕೇಳಲ್ಲ. ನಮಗೆ ರಾಜ್ಯ ಬಿಜೆಪಿ ನಾಯಕರು ಉತ್ತರ ಕೊಡಲಿ. ಯಾಕೆ ಕೇಂದ್ರ ಸರ್ಕಾರ ಅಕ್ಕಿ ಕೊಡಲು ತಯಾರಿಲ್ಲ? ಎಂದು ಪ್ರಶ್ನೆ ಮಾಡಿದರು.
ಕೇಂದ್ರ ಸರ್ಕಾರ ಅಕ್ಕಿ ಕೊಡದಿರುವ ಬಗ್ಗೆ ಇಂದಿನ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ಮಾಡುತ್ತೇವೆ. ನಾವು ವಾಗ್ದಾನ ಮಾಡಿದ್ದೇವೆ. ಅದರಂತೆ ನಡೆದುಕೊಳ್ಳಲು ಕ್ರಮ ಕೈಗೊಳ್ಳುತ್ತೇವೆ. ರಾಜ್ಯ ಸರ್ಕಾರಕ್ಕೆ ಅನ್ನಭಾಗ್ಯ ಅಕ್ಕಿ ನೀಡಲು ಎಫ್ಸಿಐ ತಿರಸ್ಕರಿಸಿದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಇಂಧನ ಸಚಿವ ಕೆ.ಜೆ.ಜಾರ್ಜ್ ಅವರು, ಈಗಾಗಲೇ ಸಿಎಂ ಸಿದ್ದರಾಮಯ್ಯ ಅವರು ಹೇಳಿದ್ದಾರೆ. ಅವರ ಮಾತಿಗೆ ನನ್ನ ಸಂಪೂರ್ಣ ಸಹಮತವಿದೆ. ಬಡವರಿಗೆ ಸಹಾಯ ಮಾಡುವ ವಿಚಾರಕ್ಕೆ ಕೇಂದ್ರ ಸರ್ಕಾರ ಸಹಕಾರ ನೀಡಬೇಕು. ಅವರ ಈ ಧೋರಣೆ ಅವರು ಯಾರ ಪರ ಇದ್ದಾರೆ ಎಂದು ತೋರಿಸುತ್ತದೆ ಎಂದು ಕಿಡಿಕಾರಿದರು. ನಾವು ಪುಕ್ಕಟ್ಟೆ ಕೊಡಿ ಎಂದು ಕೇಳಿಲ್ಲ, ಹಣ ಕೊಡ್ತೀವಿ. ಅದಕ್ಕೆ ಅವರು ನೀಡಬಹುದಿತ್ತು ಎಂದರು.
ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಮಾತನಾಡಿ, ಕೇಂದ್ರ ಸರ್ಕಾರದ ಹತ್ತಿರ ಅಕ್ಕಿ ದಾಸ್ತಾನು ಇರುತ್ತದೆ. ಆದರೆ ಕೇಂದ್ರ ಸರ್ಕಾರ ಮಲತಾಯಿ ದೋರಣೆ ಮಾಡ್ತಿದೆ. ಪಾರ್ಲಿಮೆಂಟ್ ಚುನಾವಣೆಗೆ ಕಾಂಗ್ರೆಸ್ ಪ್ರಬಲ ಆಗುತ್ತದೆ ಅಂತ ಭಯ ಅವರಿಗೆ. ಬಿಜೆಪಿ ನಾಯಕರಿಗೆ ಜನರ ಮೇಲೆ ಕಾಳಜಿ ಇದ್ದರೆ ಕೇಂದ್ರಕ್ಕೆ ಹೋಗಿ ಕೇಳಬೇಕಿತ್ತು. ನಮ್ಮ ಸರ್ಕಾರ 7 ಕೆ.ಜಿ ಅಕ್ಕಿ ಕೊಟ್ಟಿರುವುದನ್ನು ಬಿಜೆಪಿ ಸರ್ಕಾರ ಕಡಿಮೆ ಮಾಡಿದ್ರು. ಕೇಂದ್ರ ಸರ್ಕಾರ ಯಾರದು? ನಾವು ಮಾಡುವ ಕಾರ್ಯಕ್ರಮಕ್ಕೆ ಕೇಂದ್ರದ ಜೊತೆ ಕೇಳ್ಬೇಕಾ? ಎಂದು ಪ್ರಶ್ನಿಸಿದರು.
ಬಿಜೆಪಿಯವರು ಯಡಬಿಡಂಗಿಗಳು. ಅವರಿಗೆ ಇದು ಗೊತ್ತಾಗಲ್ಲ. ಸೋಲಿನ ಹತಾಶೆಯಿಂದ ಏನು ಮಾತಾಡ್ತಾರೆ ಅಂತ ಅವರಿಗೆ ಗೊತ್ತಾಗಲ್ಲ. ಅವರಿಗೆ ಅವರೇ ಸೋಲಿಸಿದ್ದಾರೆ ಅಂತ ಹತಾಶೆ ಆಗಿದ್ದಾರೆ ಎಂದು ಹೇಳಿದರು.