ಹುಬ್ಬಳ್ಳಿ: ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ರಾಜ್ಯ ದಿವಾಳಿ ಹಂತಕ್ಕೆ ಬಂದು ನಿಂತಿದೆ. ಕೂಡಲೇ ಮುಖ್ಯಮಂತ್ರಿಗಳು ನೈತಿಕ ಹೊಣೆಯನ್ನು ಹೊತ್ತು ರಾಜೀನಾಮೆ ನೀಡಬೇಕೆಂದು ಶಾಸಕ ಮಹೇಶ ಟೆಂಗಿನಕಾಯಿ ಒತ್ತಾಯಿಸಿದರು.

ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಡಾ ಹಗರಣ, ವಾಲ್ಮೀಕಿ ಹಗರಣದ ಆರೋಪವನ್ನು ಕಾಂಗ್ರೆಸ್ ಸರ್ಕಾರ ಹೊತ್ತಿದೆ‌. ಈ ಹಿನ್ನೆಲೆ ಸಿಎಂ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿ-ಜೆಡಿಎಸ್ ಜೊತೆಗೂಡಿ ಪಾದಯಾತ್ರೆ ಮಾಡುತ್ತಿದೆ. ಈಗಾಗಲೇ ಜನರಿಂದ ಯಾತ್ರೆಗೆ ಅಭೂತಪೂರ್ವ ಬೆಂಬಲ ಸಿಗುತ್ತಿದೆ‌. ಜನರು ಸ್ವಯಂಚಾಲಿತವಾಗಿ ಭ್ರಷ್ಟಾಚಾರಿ ಸರ್ಕಾರವನ್ನು ತೆಗೆದು ಹಾಕಬೇಕೆಂದು ಹೋರಾಟಕ್ಕೆ ಬೆಂಬಲ‌ ನೀಡುತ್ತಿದ್ದಾರೆ ಎಂದರು.

ಪಾದಯಾತ್ರೆ ಆರಂಭದ ಬಳಿಕ ರಾಜ್ಯಕ್ಕೆ ಕಾಂಗ್ರೆಸ್ ನಾಯಕರಾದ ಕೆ‌.ಸಿ.ವೇಣುಗೋಪಾಲ, ರಣದೀಪ್ ಸುರ್ಜೇವಾಲ್ ಬಂದಿದ್ದಾರೆ. ಇವರು ರಾಜ್ಯ ಕಾಂಗ್ರೆಸ್’ಗೆ ಶಿಕ್ಷೆ ಕೈಗೊಳ್ಳತ್ತಾರೆ ಎಂಬ ಭಾವನೆ ನಮ್ಮಲ್ಲಿತ್ತು. ಆದರೆ ಈ ನಾಯಕರು ಭ್ರಷ್ಟಾಚಾರಿಗಳಿಗೆ ಬೆಂಬಲಿಸಿದ್ದಾರೆ. ಇದನ್ನು ನೋಡಿದ್ರೆ ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ಕಾಂಗ್ರೆಸ್ ಹೈಕಮಾಂಡ್ ಎಟಿಎಂ ಆಗಿ ಬಳಕೆ ಮಾಡಿಕೊಳ್ಳುತ್ತಿದೆ ಎಂದು ಸ್ಪಷ್ಟವಾಗುತ್ತಿದೆ ಎಂದು ಹೇಳಿದರು‌.

ಮುಡಾ ಹಗರಣ, ವಾಲ್ಮೀಕಿ ಹಗರಣದ ಸಮಸ್ಯೆಗಳು ದಿನದಿಂದ ದಿನಕ್ಕೆ ಜಟೀಲವಾಗುತ್ತಿದೆ. ನಾವು ಸಮಾಜವಾದಿ ಹಿನ್ನೆಲೆಯಲ್ಲಿ ಬಂದ ಸಿಎಂ ಸತ್ಯ ಹರಿಶ್ಚಂದ್ರರಾಗಿದ್ದರೇ ಯಾಕೆ ಸದನ ನಡೆದಾಗಲೇ ಭಯಬೀತರಾಗಿದ್ದರು. ಸರಿಯಾದ ಉತ್ತರ ಕೊಡದೇ ಒಂದು ದಿನದ ಮೊದಲೇ ಸದನವನ್ನು ಮೊಟಕುಗೊಳಿಸಿದ್ದಾರೆ. ಕಾಂಗ್ರೆಸ್ ಹೈಕಮಾಂಡ್ ರಾಜೀನಾಮೆ ಪಡೆಯಲು ಮುಂದಾಗಬೇಕಿದೆ ಎಂದು ಒತ್ತಾಯಿಸಿದರು.

ರಾಜ್ಯದಲ್ಲಿ ವರ್ಗಾವಣೆ ದಂಧೆ ಹೆಚ್ಚಾಗಿದೆ. ಎಲ್ಲ ಹಂತದಲ್ಲಿ ವರ್ಗಾವಣೆ ಪಿಡುಗು ನಡೆಯುತ್ತಿದೆ‌. ಇದು ಅನೇಕ ಸಮಸ್ಯೆಗಳನ್ನು ತಂದೊಡ್ಡಿದೆ. ಅಷ್ಟೇ ಅಲ್ಲದೇ ಅನೇಕರು ಜೀವ ಕೊಟ್ಟಿದ್ದಾರೆ. ಇಂದು ಸಹ ತಿಮ್ಮೆಗೌಡ ಎಂಬ ಅಧಿಕಾರಿ ವರ್ಗಾವಣೆ ದಂಧೆಗೆ ಬಲಿಯಾಗಿದ್ದಾರೆ. ಇದನ್ನು ಅವರ ಕುಟುಂಬದ ಹೇಳಿಕೆ ಮೂಲಕ ಗೊತ್ತಾಗಿದೆ ಎಂದರು.

ಬಿಜೆಪಿ-ಜೆಡಿಎಸ್ ನಡೆಸುತ್ತಿರುವ ಪಾದಯಾತ್ರೆಗೆ ಬೆಂಬಲ ಸೂಚಿಸಲು ಧಾರವಾಡ ಜಿಲ್ಲೆಯಿಂದ ನಾಲ್ಕನೇ ದಿನದಲ್ಲಿ 2 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ. ಪಾದಯಾತ್ರೆ ಅಂತ್ಯಗೊಳುವ ಮೊದಲೇ ರಾಜ್ಯದಲ್ಲಿ ಸಿಎಂ ರಾಜೀನಾಮೆ ಖಚಿತವಾಗಲಿದೆ ಎಂದು ಭವಿಷ್ಯ ನುಡಿದರು.

ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ವೀರಣ್ಣ ಸವಡಿ, ತಿಪ್ಪಣ್ಣ ಮಜ್ಜಗಿ, ರಾಮಣ್ಣ ಬಡಿಗೇರ್, ರವಿ ನಾಯಕ, ಹಾಗೂ ದುರ್ಗಮ್ಮ ಬಿಜವಾಡ ಇದ್ದರು.

Leave a Reply

Your email address will not be published. Required fields are marked *