ಚಂಡೀಗಢ : ʻಭಾರತ್ ಜೋಡೋʼ ಯಾತ್ರೆಯಲ್ಲಿ ಕಾಣಿಸಿಕೊಂಡಿದ್ದ ಕಾಂಗ್ರೆಸ್ ಕಾರ್ಯಕರ್ತೆ ಹಿಮಾನಿ ನರ್ವಾಲ್ ಅವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಶಂಕಿತನನ್ನ ಬಂಧಿಸಲಾಗಿದೆ ಎಂದು ಹರಿಯಾಣ ಪೊಲೀಸ್‌ ಮೂಲಗಳು ತಿಳಿಸಿವೆ.

ಶಂಕಿತ ಆರೋಪಿಯಿಂದ ಹಿಮಾನಿ ನರ್ವಾಲ್‌ನ ಮೊಬೈಲ್‌ ಹಾಗೂ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತನನ್ನ ಬಹದ್ದೂರ್‌ಗಢ ನಿವಾಸಿಯಾಗಿದ್ದು, ಈತ ಹಿಮಾನಿಯೊಂದಿಗೆ ಸಂಪರ್ಕ ಹೊಂದಿದ್ದ ಎಂದು ವರದಿಗಳು ತಿಳಿಸಿವೆ.

ರೋಹ್ಟಕ್ ಜಿಲ್ಲೆಯ ಬಸ್ ನಿಲ್ದಾಣದ ಬಳಿಯಿದ್ದ ಸೂಟ್‌ಕೇಸ್‌ನಲ್ಲಿ ಹಿಮಾನಿ ಶವ ಪತ್ತೆಯಾದ ಬಳಿಕ ಪ್ರಕರಣ ದಾಖಲಿಸಿಕೊಂಡಿದ್ದ ಹರಿಯಾಣ ಪೊಲೀಸ್‌ ಇಲಾಖೆ ತನಿಖೆಗಾಗಿ ವಿಶೇಷ ತಂಡವನ್ನ ರಚನೆ ಮಾಡಿತ್ತು. ಪ್ರಕರಣ ಬೆಳಕಿಗೆ ಬಂದ ಒಂದು ದಿನದ ನಂತರ ಓರ್ವನನ್ನ ಬಂಧಿಸಲಾಗಿದೆ.

ಏನಿದು ಪ್ರಕರಣ? – ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರೊಂದಿಗೆ ʻಭಾರತ್ ಜೋಡೋʼಯಾತ್ರೆಯಲ್ಲಿ ಕಾಣಿಸಿಕೊಂಡಿದ್ದ, ಕಾಂಗ್ರೆಸ್ ಕಾರ್ಯಕರ್ತೆ ಹಿಮಾನಿ ನರ್ವಾಲ್‌ (22) ಶವ ಹರಿಯಾಣದ ರೋಹ್ಟಕ್ ಜಿಲ್ಲೆಯ ಬಸ್ ನಿಲ್ದಾಣದ ಬಳಿ ಪತ್ತೆಯಾಗಿತ್ತು.

ಸಂಪ್ಲಾ ಬಸ್ ನಿಲ್ದಾಣದ ಬಳಿ ದಾರಿಹೋಕರು ಸೂಟ್‌ಕೇಸ್ ಇರುವುದನ್ನು ಗಮನಿಸಿದ್ದು, ಪೊಲೀಸರಿಗೆ ಮಾಹಿತಿ ನೀಡಿದ್ದರು. ಕೂಡಲೇ ವಿಧಿವಿಜ್ಞಾನ ತಂಡದೊಂದಿಗೆ ಸ್ಥಳಕ್ಕೆ ಧಾವಿಸಿದ ಪೊಲೀಸರು ಸೂಟ್‌ಕೇಸ್‌ನಲ್ಲಿ ಶವ ಇರುವುದನ್ನು ಪತ್ತೆಹಚ್ಚಿದ್ದರು. ಶವವನ್ನು ಹೊರತೆಗೆದಾಗ ಕುತ್ತಿಗೆ ಭಾಗಕ್ಕೆ ದುಪ್ಪಟ್ಟಾದಿಂದ ಬಿಗಿಯಲಾಗಿತ್ತು. ಹೀಗಾಗಿ ಕೊಲೆ ಮಾಡಿರಬಹುದು ಎಂದು ಪೊಲೀಸರು ಶಂಕಿಸಿದ್ದರು. ಆಕೆಯ ಶವವನ್ನ ಮರಣೋತ್ತರ ಪರೀಕ್ಷೆಗಾಗಿ ರೋಹ್ಟಕ್ ಪಿಜಿಐಎಂಎಸ್‌ಗೆ ರವಾನಿಸಲಾಗಿದೆ.

Leave a Reply

Your email address will not be published. Required fields are marked *