ನವದೆಹಲಿ : ಕ್ರಿಪ್ಟೋಕರೆನ್ಸಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಟಾರ್‌ ನಟಿಯರಾದ ತಮನ್ನಾ ಭಾಟಿಯಾ ಹಾಗೂ ಕಾಜಲ್‌ ಅಗರ್ವಾಲ್‌ ಅವರನ್ನು ವಿಚಾರಣೆ ನಡೆಸಲು ಪುದುಚೇರಿ ಪೊಲೀಸರು ನಿರ್ಧರಿಸಿರುವುದಾಗಿ ವರದಿಯಾಗಿದೆ.

ಬಹುಭಾಷೆಗಳಲ್ಲಿ ಸ್ಟಾರ್‌ ತಾರೆಯರಾಗಿರುವ ತಮನ್ನಾ ಭಾಟಿಯಾ ಹಾಗೂ ಕಾಜಲ್‌ ಅಗರ್ವಾಲ್‌ ಇಬ್ಬರನ್ನು ವಿಚಾರಣೆ ನಡೆಸಲು ಪೊಲೀಸರು ನಿರ್ಧರಿಸಿದ್ದಾರೆ. ಕೊಯಮತ್ತೂರು ಮೂಲದ ಕ್ರಿಪ್ಟೋಕರೆನ್ಸಿ ಕಂಪನಿ ಹೆಚ್ಚಿನ ಲಾಭದ ಭರವಸೆ ನೀಡಿ ಜನರನ್ನು ವಂಚಿಸಲಾಗುತ್ತಿದೆ ಎಂದು ಪೊಲೀಸರಿಗೆ ದೂರು ಬಂದಿತ್ತು. ನಿವೃತ್ತ ಸರ್ಕಾರಿ ಉದ್ಯೋಗಿ ಅಶೋಕ್‌ ಎಂಬವರು ಪೊಲೀಸರಿಗೆ ದೂರು ನೀಡಿದ್ದರು.

ಲಾಭ ಗಳಿಸುವ ಭರವಸೆ ನೀಡಿದ 10 ಜನರಿಂದ 2.40 ಕೋಟಿ ರೂ.ಗಳನ್ನು ಕಂಪನಿ ಸಂಗ್ರಹಿಸಿದೆ ಎಂದು ಆರೋಪಿಸಿದ್ದರು. ಈ ಕಂಪನಿಯ ಕಾರ್ಯಕ್ರಮಗಳಲ್ಲಿ ತಮನ್ನಾ, ಕಾಜಲ್‌ ಅಗರ್ವಾಲ್‌ ಭಾಗವಹಿಸಿದ್ದ ಕಾರಣಕ್ಕೆ ಅವರ ವಿರುದ್ಧವೂ ದೂರು ದಾಖಲಿಸಲಾಗಿದೆ ಎಂದು ವರದಿಗಳು ತಿಳಿಸಿವೆ.

ಕ್ರಿಪ್ಟೋಕರೆನ್ಸಿ ಕಂಪನಿಯು 2020-22ರ ಅವಧಿಯಲ್ಲಿ ಕೊಯಮತ್ತೂರಿನಲ್ಲಿ ತನ್ನ ಮುಖ್ಯ ಶಾಖೆ ತೆರೆಯಿತು. ಉದ್ಘಾಟನಾ ಸಮಾರಂಭದಲ್ಲಿ ಸ್ಟಾರ್ ನಾಯಕಿ ತಮನ್ನಾ ಭಾಗವಹಿಸಿದ್ದರು. ಮಹಾಬಲಿಪುರಂನ ಸ್ಟಾರ್ ಹೋಟೆಲ್‌ನಲ್ಲಿ ನಡೆದ ಕಂಪನಿಯ ಕಾರ್ಯಕ್ರಮದಲ್ಲಿ ಮತ್ತೊಬ್ಬ ಸ್ಟಾರ್ ನಾಯಕಿ ಕಾಜಲ್ ಅಗರ್ವಾಲ್ ಪಾಲ್ಗೊಂಡಿದ್ದರು. ಅದಾದ ನಂತರ ಮುಂಬೈನಲ್ಲಿ ಒಂದು ದೊಡ್ಡ ಪಾರ್ಟಿಯನ್ನು ಆಯೋಜಿಸಿ ಸಾವಿರಾರು ಜನರಿಂದ ಹಣವನ್ನು ಸಂಗ್ರಹಿಸಿದರು.

ಜನರನ್ನು ಲಾಭದ ಹೆಸರಿನಲ್ಲಿ ವಂಚಿಸಿದ ಆರೋಪದ ಮೇಲೆ ಪೊಲೀಸರು ಈಗಾಗಲೇ ನಿತೀಶ್ ಜೈನ್ (36) ಮತ್ತು ಅರವಿಂದ್ ಕುಮಾರ್ (40) ಅವರನ್ನು ಬಂಧಿಸಿದ್ದಾರೆ. ಈಗ, ಪ್ರಕರಣದ ತನಿಖೆಯ ಭಾಗವಾಗಿ ಪುದುಚೇರಿ ಪೊಲೀಸರು ತಮನ್ನಾ ಮತ್ತು ಕಾಜಲ್ ಅಗರ್ವಾಲ್ ಅವರನ್ನು ವಿಚಾರಣೆ ಮಾಡಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.

Leave a Reply

Your email address will not be published. Required fields are marked *