ಬಾಹ್ಯಾಕಾಶದಿಂದ ನೋಡಿದರೆ ಬಿಪೋರ್ಜಾಯ್ ಚಂಡಮಾರುತ ಹೇಗೆ ಕಾಣುತ್ತದೆ? ಯುಎಇ ಗಗನಯಾತ್ರಿ ಸುಲ್ತಾನ್ ಅಲ್ ನೆಯಾಡಿ ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ಸೆರೆ ಹಿಡಿದಿರುವ ಚಿತ್ರಗಳು ಇಲ್ಲಿವೆ. ಬಿಪೋರ್ಜಾಯ್ ಚಂಡಮಾರುತದ ಚಿತ್ರವನ್ನು ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಗಗನಯಾತ್ರಿಯೊಬ್ಬರು ಸೆರೆ ಹಿಡಿದಿದ್ದಾರೆ. ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಗಗನಯಾತ್ರಿ ಸುಲ್ತಾನ್ ಅಲ್ ನೆಯಾಡಿ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಅರಬ್ಬೀ ಸಮುದ್ರದ ಮೇಲೆ ಬಿಪೋರ್ಜಾಯ್ ಚಂಡಮಾರುತದ ಚಿತ್ರಗಳನ್ನು ಪೋಸ್ಟ್ ಮಾಡಿದ್ದಾರೆ. ನನ್ನ ಹಿಂದಿನ ವಿಡಿಯೊದಲ್ಲಿ ಭರವಸೆ ನೀಡಿದಂತೆ ಬಿಪೋರ್ಜಾಯ್ ಚಂಡಮಾರುತವು ಅರಬ್ಪೀ ಸಮುದ್ರದಲ್ಲಿ ರೂಪುಗೊಳ್ಳುವ ಕೆಲವು ಚಿತ್ರಗಳನ್ನು ನಾನು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ಎರಡು ದಿನಗಳಲ್ಲಿ ಕ್ಲಿಕ್ ಮಾಡಿದ್ದೇನೆ ಎಂದು ಅಲ್ ನೆಯಾಡಿ ಟ್ವೀಟ್ ಮಾಡಿದ್ದಾರೆ. ಎರಡು ದಿನಗಳ ಹಿಂದೆ ಅರಬ್ಬೀ ಸಮುದ್ರದ ಮೇಲೆ ದೈತ್ಯಾಕಾರದ ಚಂಡಮಾರುತವು ಭಾರತದ ಕರಾವಳಿಯತ್ತ ಸಾಗುತ್ತಿರುವುದನ್ನು ತೋರಿಸುವ ವಿಡಿಯೊವನ್ನು ಅಲ್ ನೆಯಾಡಿ ಹಂಚಿಕೊಂಡಿದ್ದರು. ಗುರುವಾರ ಸಂಜೆ ಬಿಪೋರ್ಜಾಯ್ ಚಂಡಮಾರುತ ಗುಜರಾತಿನ ಕಚ್ಗೆ ಅಪ್ಪಳಿಸುವ ನಿರೀಕ್ಷೆಯಿದೆ. 74,000 ಕ್ಕೂ ಹೆಚ್ಚು ಜನರನ್ನು ಕರಾವಳಿ ಪ್ರದೇಶಗಳಿಂದ ಸುರಕ್ಷಿತ ಆಶ್ರಯಕ್ಕೆ ಸ್ಥಳಾಂತರಿಸಲಾಗಿದೆ. ಬಿಪೋರ್ಜಾಯ್ ಚಂಡಮಾರುತವು ಪ್ರಸ್ತುತ ಗುಜರಾತ್ ಕರಾವಳಿಯಿಂದ ಸುಮಾರು 200 ಕಿಮೀ ದೂರದಲ್ಲಿ ಮಾಂಡ್ವಿ ಮತ್ತು ಕರಾಚಿ ನಡುವೆ ಜಖೌ ಬಂದರಿನ ಬಳಿ ಸಂಜೆ 4-8 ಗಂಟೆಯ ನಡುವೆ ಅಪ್ಪಳಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ. ಚಂಡಮಾರುತವು ಗುಜರಾತ್ನ ಸೌರಾಷ್ಟ್ರ ಮತ್ತು ಕಚ್ ಪ್ರದೇಶಗಳು ಮತ್ತು ಪಕ್ಕದ ಪಾಕಿಸ್ತಾನದ ಕರಾವಳಿಯಲ್ಲಿ ಭಾರೀ ಮಳೆ ಮತ್ತು ಪ್ರಬಲ ಗಾಳಿಗೆ ಕಾರಣವಾಗಲಿದೆ. ವರ್ಗ 3 ರ ಅತ್ಯಂತ ತೀವ್ರ ಚಂಡಮಾರುತ ಎಂದು ವರ್ಗೀಕರಿಸಿರುವ ಬಿಪೋರ್ಜಾಯ್ ಚಂಡಮಾರುತವು ಗಂಟೆಗೆ 120-130 ಕಿಮೀ ವೇಗದಲ್ಲಿ ಗಾಳಿಯನ್ನು ತರುವ ಸಾಧ್ಯತೆಯಿದೆ ಎಂದು ಐಎಂಡಿ ಹೇಳಿದೆ. Post Views: 53 Post navigation Cabinet Meeting: ಮತಾಂತರ ನಿಷೇಧ ಕಾಯ್ದೆ ತಿದ್ದುಪಡಿಗೆ ತೀರ್ಮಾನ, ಪಠ್ಯ ಪರಿಷ್ಕರಣೆಗೆ ಅಸ್ತು ಎಂದ ಸಿದ್ದರಾಮಯ್ಯ ಸಂಪುಟ! Gruha Lakshmi Scheme: ಗೃಹಲಕ್ಷ್ಮೀ ಯೋಜನೆ ಅರ್ಜಿ ಸಲ್ಲಿಕೆ ಇನ್ನೂ ನಾಲ್ಕೈದು ದಿನ ವಿಳಂಬ: ಲಕ್ಷ್ಮಿ ಹೆಬ್ಬಾಳ್ಕರ್