ಚಿಕ್ಕಮಗಳೂರು : ಗಂಡು-ಹೆಣ್ಣಿನ ಮನೆಯವರು ಸೇರಿ ನಿಶ್ಚಯಿಸಿದ ಮದುವೆ, ಎರಡೂ ಕುಟುಂಬದ ನೆಂಟರು, ಆಪ್ತರು ಮದುವೆಯನ್ನು ಕಣ್ತುಂಬಿಕೊಳ್ಳಲು ತಯಾರಾಗಿ ಮದುವೆ ಮಂಟಪದ ಮುಂದೆ ಕುಳಿತಿದ್ದರು. ಮಗಳ ಮದುವೆ ಅನ್ನೋ ಖುಷಿಯಲ್ಲಿದ್ದ ಅಪ್ಪ. ಮದುವೆಗಾಗಿ ರಾತ್ರಿ-ಹಗಲೆನ್ನದೆ ಓಡಾಡುತ್ತಿದ್ದರು. ಯಾರ ಕಣ್ಣು ಬಿತ್ತೋ ಏನೋ.. ಗೊತ್ತಿಲ್ಲ, ಮದುವೆಗೆ ಇನ್ನೇನು ಒಂದು ದಿನ ಇದೆ ಅನ್ನೋವಾಗ ನಡೆದೇ ಹೋಯ್ತು ಒಂದು ದುರಂತ ಘಟನೆ.
ಮಗಳ ಮದುವೆ ಅನ್ನೋ ಸಂಭ್ರಮದಲ್ಲಿದ್ದ ತಂದೆ, ಪೂರ್ವ ತಯಾರಿಗಾಗಿ ಸುತ್ತಾಡುತ್ತಲೇ ಇದ್ದರು. ಆದ್ರೆ ಮದುವೆ ಹಿಂದಿನ ದಿನ ಮಗಳ ಮದುವೆ ಅನ್ನೋ ಖುಷಿಯಲ್ಲಿದ್ದ ಅಪ್ಪ ಬಾರದ ಲೋಕಕ್ಕೆ ಹೋಗಿಯೇಬಿಟ್ಟರು. ಮದುವೆ ಮಾತ್ರ ನಿಲ್ಲಬಾರದೆಂಬ ಕಾರಣಕ್ಕೆ ಈ ವಿಷಯವನ್ನು ಮನೆಯವರು ಮುಚ್ಚಿಟ್ಟಿದ್ದರು. ಹಾಗಿದ್ರೆ ಅಷ್ಟಕ್ಕೂ ಆಗಿದ್ದೇನು? ಸಂಪೂರ್ಣ ಮಾಹಿತಿ ಇಲ್ಲಿದೆ.
ಮಗಳ ಮದುವೆ ಸಂಭ್ರಮದಲಿದ್ದ ತಂದೆ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿರುವ ಪ್ರಕರಣ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಹುಲಿತಿಮ್ಮಾಪುರದಲ್ಲಿ ನಡೆದಿದೆ. ಇಂದು ಮಗಳ ಮದುವೆ, ಈ ಹಿನ್ನೆಲೆ ತಂದೆ ಚಂದ್ರಪ್ಪ ಸಿದ್ಧತೆಗಾಗಿ ಓಡಾಡುತ್ತಿದ್ದರು. ಆದ್ರೆ ದುರಾದೃಷ್ಟವೆಂಬಂತೆ ನಿನ್ನೆ ತರೀಕೆರೆ ತಾಲೂಕಿನ ಹುಲಿತಿಮ್ಮಾಪುರ ಬಳಿ ಚಂದ್ರಪ್ಪ (45) ಅವರಿಗೆ ಅಪಘಾತ ನಡೆದಿದೆ.
ಈ ಪರಿಣಾಮ ನಿನ್ನೆಯೇ ಚಂದ್ರಪ್ಪ ಅಪಘಾತದಲ್ಲಿ ಮೃತಪಟ್ಟಿದ್ದರು. ಆದ್ರೆ ಮಗಳ ಮದುವೆ ನಿಲ್ಲಬಾರದೆಂಬ ಕಾರಣಕ್ಕೆ ಈ ವಿಷಯವನ್ನು ಸ್ಥಳೀಯರು ಮುಚ್ಚಿಟ್ಟಿದ್ದರು. ಮದುವೆ ಮುಗಿದ ಬಳಿಕ ತಕ್ಷಣ ಕುಟುಂಬಸ್ಥರಿಗೆ ಮಾಹಿತಿ ತಿಳಿಸಿದ್ದಾರೆ. ಸಾವಿನ ಸುದ್ದಿ ತಿಳಿದು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಇನ್ನು ತರೀಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.