ಕನಕಪುರ : ಕಂದಾಯ ಇಲಾಖೆಯಿಂದ 30-40 ಸಿಬ್ಬಂದಿ ಒದಗಿಸಿದರೆ ನಾನೇ ಮುಂದೆ ನಿಂತು ಮುಂದಿನ ನಾಲ್ಕು ತಿಂಗಳಲ್ಲಿ ತಾಲೂಕಿನಲ್ಲಿ ಮರು ಭೂಮಾಪನ ಯೋಜನೆ ಪೂರ್ಣಗೊಳಿಸುತ್ತೇನೆ ಎಂದು ಮಾಜಿ ಸಂಸದ ಡಿ.ಕೆ. ಸುರೇಶ್ ಕಂದಾಯ ಇಲಾಖೆ ಅಧಿಕಾರಿಗಳಲ್ಲಿ ಮನವಿ ಮಾಡಿದರು.

ಕನಕಪುರದಲ್ಲಿ ನಡೆದ ಮರು ಭೂಮಾಪನ ಯೋಜನೆಯಡಿಯಲ್ಲಿ ಆಧುನಿಕ ತಂತ್ರಜ್ಞಾನ ಬಳಸಿ ಸೃಜಿಸಲಾದ ಕರಡು ಆರ್ ಟಿಸಿ ದಾಖಲೆಗಳ ವಿತರಣೆ ಕಾರ್ಯಕ್ರಮದಲ್ಲಿ ಸುರೇಶ್ ಅವರು ಭಾಗವಹಿಸಿ ಮಾತನಾಡಿದರು.

ಕಂದಾಯ ಇಲಾಖೆಯಲ್ಲಿ ಇದೊಂದು ಐತಿಹಾಸಿಕ ದಿನ. 100 ವರ್ಷಕ್ಕೂ ಹೆಚ್ಚು ಕಾಲ ಅಳವಡಿಸಿಕೊಂಡಿದ್ದ ಭೂಮಾಪನ ಪದ್ಧತಿ ಹೊರತಾಗಿ ಈಗ ಹೊಸ ಮಾದರಿಯ ಮಾಪನ ವ್ಯವಸ್ಥೆ ಅಳವಡಿಸಿಕೊಳ್ಳಲಾಗಿದೆ. ಆಮೂಲಕ ದೊಡ್ಡಆಲಹಳ್ಳಿಯಲ್ಲಿ ಡಿ.ಕೆ.ಶಿವಕುಮಾರ್ ಅವರ ನೇತೃತ್ವದಲ್ಲಿ ರಾಜ್ಯಕ್ಕೆ ಹಾಗೂ ದೇಶಕ್ಕೆ ಮಾದರಿಯಾಗುವ ಕಾರ್ಯಕ್ರಮ ಮಾಡಲಾಗಿದೆ ಎಂದರು.

ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳು, ಸರ್ವೇ ಇಲಾಖೆ, ಜಿಲ್ಲಾಡಳಿತಕ್ಕೆ ಧನ್ಯವಾದ ತಿಳಿಸುತ್ತೇನೆ. ಸರ್ವೇ ಕಚೇರಿ ಎಂದರೆ ರೈತರ ಪಾಲಿನ ಸಿಂಹಸ್ವಪ್ನ. ಇದಕ್ಕೆ ಪರಿಹಾರ ನೀಡಲು ಕರ್ನಾಟಕ ಸರ್ಕಾರ ಈ ಪ್ರಾಯೋಗಿಕ ಪ್ರಯತ್ನ ಮಾಡಿದೆ ಎಂದು ಹೇಳಿದರು.

ಮೊದಲು ಯಾವ ಜಿಲ್ಲೆಯಲ್ಲಿ ಮಾಡಬೇಕು ಎಂದು ಚಿಂತನೆ ನಡೆಸುವಾಗ ನಾನು ನಮ್ಮ ರಾಮನಗರ ಜಿಲ್ಲೆಯ ನಮ್ಮ ಕ್ಷೇತ್ರದಲ್ಲೇ ಮಾಡಿ ಎಂದು ಕಂದಾಯ ಸಚಿವರಿಗೆ ಮನವಿ ಮಾಡಿದೆ.

ಉಯ್ಯಂಬಳ್ಳಿ ಹೋಬಳಿಯಲ್ಲಿ 35 ಕಂದಾಯ ಗ್ರಾಮಗಳಿದ್ದು, 33 ಗ್ರಾಮಗಳಲ್ಲಿ 23,469 ರೈತರ ಭೂಮಿಯ ಸರ್ವೇ ಮಾಡಲಾಗಿದೆ. ಕೆಲವರು ಸರಪಳಿ ಹಾಕಿ ಅಳತೆ ಮಾಡಿದರೆ ಮಾತ್ರ ಸರ್ವೇ ಎಂದು ಭಾವಿಸಿದ್ದಾರೆ. ಹೀಗಾಗಿ ಅನೇಕರು ನಮ್ಮ ಜಮೀನು ಸರ್ವೇ ಆಗಿದೆ ಎಂದರೆ ನಂಬುತ್ತಿಲ್ಲ ಎಂದು ತಿಳಿಸಿದರು.

ಈ ಆರ್ ಟಿಸಿ ಒಳಗೆ ಜಮೀನು ಮಾಲೀಕರ ಹೆಸರಿನ ಜತೆಗೆ ಅವರ ಫೋಟೋ ಹಾಗೂ ಆಧಾರ್ ಕಾರ್ಡ್ ಸಂಖ್ಯೆಯನ್ನು ಸೇರಿಸುವ ಕೆಲಸ ಮಾಡಬೇಕು. ಆಗ ಒಂದೇ ಹೆಸರಿನ ಹಲವು ವ್ಯಕ್ತಿಗಳಿದ್ದರೂ ಗೊಂದಲ ಆಗುವುದಿಲ್ಲ ಎಂದು ಸಲಹೆ ನೀಡಿದರು.

Leave a Reply

Your email address will not be published. Required fields are marked *