ಇಂದು ಮಕ್ಕಳಲ್ಲಿಯೂ ಮಧುಮೇಹವನ್ನು ಸರ್ವೇಸಾಮಾನ್ಯವಾಗಿ ನೋಡುತ್ತಿದ್ದೇವೆ. ಮಕ್ಕಳಲ್ಲಿಯೂ ಟೈಪ್–1 ಮತ್ತು ಟೈಪ್–2 ಡಯಾಬಿಟಿಸ್ ಕಾಣಿಸಿಕೊಳ್ಳುತ್ತಿದ್ದು, ಇದು ಮಕ್ಕಳ ಭವಿಷ್ಯದ ದೃಷ್ಟಿಯಿಂದ ಅತ್ಯಂತ ಅಪಾಯಕಾರಿಯಾಗಿದೆ.
ಪೌಷ್ಟಿಕಾಂಶದ ಸಲಹೆ ನೀಡುವುದಷ್ಟೇ ಅಲ್ಲ, ಸಕ್ಕರೆ ಅಂಶವುಳ್ಳ ಆಹಾರ ಪದಾರ್ಥಗಳು ಮತ್ತು ಸಂಸ್ಕರಿಸಿದ ಆಹಾರಗಳಿಂದ ಎದುರಾಗುವ ಅಪಾಯಗಳ ಕುರಿತು ತಿಳಿಸಬೇಕಾಗಿದೆ. ಮೈದಾ, ಬ್ರೆಡ್ ಬದಲಿಗೆ ಧಾನ್ಯ ಅಥವಾ ಕಡಿಮೆ ಸಕ್ಕರೆ ಅಂಶವುಳ್ಳ ಹಣ್ಣುಗಳನ್ನು ಬಳಕೆ ಮಾಡುವಂತೆ ತಿಳಿಸಲಾಗುವುದು. ಇದು ಜೀವನಶೈಲಿಯನ್ನು ಬದಲಾಯಿಸುತ್ತದೆ.
ಮಧುಮೇಹ ದೈಹಿಕ ಆರೋಗ್ಯದ ಮೇಲಷ್ಟೇ ಅಲ್ಲ, ಮಕ್ಕಳ ಮಾನಸಿಕ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಹೀಗಾಗಿ ಮಕ್ಕಳಿಗೆ ಅವರ ಸ್ಥಿತಿಯ ಬಗ್ಗೆ ಅರ್ಥ ಮಾಡಿಸುವುದು ಮುಖ್ಯವಾಗುತ್ತದೆ. ಇದರಿಂದ ಮಧುಮೇಹವನ್ನು ಸುಲಭವಾಗಿ ನಿರ್ವಹಣೆ ಮಾಡಬಹುದು. ಸ್ನೇಹಿತರೊಂದಿಗೆ ಕೂಡಿದಾಗ ಮಕ್ಕಳು ಒತ್ತಡವನ್ನು ಅನುಭವಿಸುತ್ತಾರೆ. ಇದು ಅವರ ಆತ್ಮವಿಶ್ವಾಸದ ಮೇಲೆ ಪರಿಣಾಮ ಬೀರುತ್ತದೆ.
ಹೀಗಾಗಿ ಮಕ್ಕಳಿಕೆ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಬೇಕು. ಈ ಬಗ್ಗೆಯೂ ಅರಿವು ಮೂಡಿಸಬೇಕು. ವ್ಯಾಯಾಮವು ಮಧುಮೇಹವನ್ನು ನಿರ್ವಹಿಸಲು ಸಹಾಯ ಮಾಡುವ ಸರಳ ಮಾರ್ಗಗಳಲ್ಲಿ ಒಂದಾಗಿದೆ. ಇದು ಅವರ ಮಾನಸಿಕ ಯೋಗಕ್ಷೇಮಕ್ಕೂ ಒಳ್ಳೆಯದು ಎಂದು ತಿಳಿಸಿದ್ದಾರೆ.
ಮಕ್ಕಳಲ್ಲಿ ಮಧುಮೇಹ ನಿಯಂತ್ರಿಸುವುದು ಹೇಗೆ? – ಮಕ್ಕಳಲ್ಲಿ ಮಧುಮೇಹ ನಿಯಂತ್ರಿಸಲು ಸಮತೋಲಿತ ಮತ್ತು ಪೌಷ್ಟಿಕ ಆಹಾರ ಅತ್ಯಗತ್ಯ. ಹೆಚ್ಚು ತರಕಾರಿ, ಹಣ್ಣು, ಧಾನ್ಯ ಮತ್ತು ಪ್ರೋಟೀನ್ ಸೇವನೆ ಹೆಚ್ಚಾಗಿರಲಿ. ಸಕ್ಕರೆ, ಕಾರ್ಬೋಹೈಡ್ರೇಟ್ ಆಹಾರದ ಮೇಲೆ ಸಂಪೂರ್ಣ ನಿಯಂತ್ರಣ ಇರಿಸಬೇಕು.
ನಿಯಮಿತ ಏರೋಬಿಕ್ ವ್ಯಾಯಾಮ, ಮಕ್ಕಳನ್ನು ಕ್ರೀಡೆಯಲ್ಲಿ ತೊಡಗಿಸುವುದು ಸೇರಿದಂತೆ ದೈಹಿಕ ಚಟುವಟಿಕೆಯಲ್ಲಿ ಕ್ರಿಯಾಶೀಲರಾಗಿರುವಂತೆ ನೋಡಿಕೊಳ್ಳಿ. ಜೊತೆಗೆ, ಸಕ್ಕರೆ ಮಟ್ಟವನ್ನು ಪ್ರತಿ ನಿತ್ಯ ತಪಾಸಣೆ ಮಾಡುತ್ತ ಬರುವುದರಿಂದ ಸಕ್ಕರೆ ಮಟ್ಟದ ಬಗ್ಗೆ ತಿಳಿದುಕೊಳ್ಳಲು ಸಾಧ್ಯವಾಗುತ್ತದೆ.