ಬೆಂಗಳೂರು : ಸಿಎಂ ಹೆಸರು ದುರ್ಬಳಕೆ ಮಾಡಿಕೊಳ್ಳೋದು ಬೇಡ ಎಂಬ ಡಿಸಿಎಂ ಡಿ.ಕೆ ಶಿವಕುಮಾರ್ ಹೇಳಿಕೆಗೆ ಸಚಿವ ಕೆ.ಎನ್ ರಾಜಣ್ಣ ತಿರುಗೇಟು ನೀಡಿದ್ದಾರೆ. ಸಿಎಂ ಹೆಸರು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಅನ್ನೋದು ಹೇಳಿಕೆ ಅಷ್ಟೇ, ಎಚ್ಚರಿಕೆ ಅಲ್ಲ. ಎಚ್ಚರಿಕೆ-ಗಿಚ್ಚರಿಕೆ ಎಲ್ಲಾ ನಡೆಯಲ್ಲ, ಎಚ್ಚರಿಕೆನಾ ಯಾರು ಕೇಳ್ತಾರೆ ಎಂದು ಗುಡುಗಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಈ ವೇಳೆ, ನಾವು ಯಾರ ಹೆಸರನ್ನು ದುರ್ಬಳಕೆ ಮಾಡಿಕೊಂಡಿಲ್ಲ. ಅವರು ಎಐಸಿಸಿ ಹೆಸರನ್ನ ದುರ್ಬಳಕೆ ಮಾಡಿಕೊಳ್ಳುವುದು ಬೇಡ. ಎಲ್ಲದಕ್ಕೂ ಎಐಸಿಸಿ ಹೇಳಿದೆ ಎಂದು ಎಐಸಿಸಿ ಹೆಸರನ್ನ ಅವರು ದುರ್ಬಳಕೆ ಮಾಡಿಕೊಳ್ಳಬಾರದು. ಇದು ಆರೋಪ ಅಲ್ಲ ವಾಸ್ತವ. ನಾನು ಯಾರಿಂದಲೂ ಶಿಸ್ತಿನ ಪಾಠ ಮಾಡಿಸಿಕೊಳ್ಳಬೇಕಿಲ್ಲ. 50 ವರ್ಷ ಪಕ್ಷಕ್ಕೆ ಕೆಲಸ ಮಾಡಿದ್ದೇನೆ. ನಾನು ಮಾತನಾಡಿದರೆ ಸತ್ಪರಿಣಾಮ ಬೀರುವ ಮಾತನಾಡುತ್ತೇನೆಯೇ ಹೊರತು ದುಷ್ಪರಿಣಾಮ ಬೀರುವ ಮಾತನಾಡಲ್ಲ ಎಂದು ಗುಡುಗಿದ್ದಾರೆ.

ಪೂರ್ಣಾವಧಿ ಸಿಎಂ ವಿಚಾರದಲ್ಲಿ ನಾನೇನು ಹಟಕ್ಕೆ ಬಿದ್ದಿಲ್ಲ. ಅಂತಿಮ ನಿರ್ಧಾರ ಹೈಕಮಾಂಡ್ ಮಾಡಲಿದೆ. ಹೈಕಮಾಂಡ್ ಹೇಳಿದಂತೆ ಲೋಕಸಭೆ ಚುನಾವಣೆಯವರೆಗೆ ಅಧ್ಯಕ್ಷ ಅನ್ನೋ ಕಾರಣಕ್ಕೆ ಕೇಳಿದ್ದೇವೆ. ಉಪ ಮುಖ್ಯಮಂತ್ರಿ ಸ್ಥಾನ ಹೆಚ್ಚುವರಿ ಕೊಟ್ಟಿದ್ದರೆ, ಲೋಕಸಭೆ ಚುನಾವಣೆಯಲ್ಲಿ ಸಹಾಯ ಆಗುತ್ತಿತ್ತು ಈಗ ಕೇಳಲ್ಲ. ಡಿಸಿಎಂ ಸ್ಥಾನ ಅಂದರೆ ಏನು ತಲೆ ಮೇಲೆ ಹೆಚ್ಚುವರಿ ಕಿರೀಟ ಇರಲ್ಲ ಎಂದು ಕಿಡಿಕಾರಿದ್ದಾರೆ.

ಪೂರ್ಣಾವಧಿ ಅಲ್ಪಾವಧಿ ಏನೇ ಇದ್ದರೂ ಎಲ್ಲಾ ಹೈಕಮಾಂಡ್ ತೀರ್ಮಾನ ಮಾಡಲಿದೆ. ಸಿಎಲ್‍ಪಿ ಸಭೆಯಲ್ಲೇ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಅವರೇ ಹೇಳಿದ ಮೇಲೆ ನಮ್ಮದೇನು. ನನಗೂ ಡಿ.ಕೆ.ಶಿವಕುಮಾರ್ ಅವರಿಗೂ ವೈಯುಕ್ತಿಕವಾಗಿ ಏನೂ ಇಲ್ಲ. ಈ ವಿಚಾರ ಭಿನ್ನ ಇರಬಹುದು ಅಷ್ಟೇ, ವಿಧಾನಸೌಧಕ್ಕೆ ನಾನು ಒಂದು ರಸ್ತೆಯಲ್ಲಿ ಹೋಗೋಣ, ಅಂದರೆ ಅವರು ಒಂದು ರಸ್ತೆಯಲ್ಲಿ ಹೋಗೋಣ ಎನ್ನಬಹುದು. ನಾನು ಅವರು ಸಾಕಷ್ಟು ವರ್ಷದ ಸ್ನೇಹಿತರು. ಒಟ್ಟಿಗೆ ವಿದೇಶ ಪ್ರವಾಸ ಮಾಡಿದ್ದೇವೆ. ಅವರನ್ನು ಮನೆಗೆ ಒಂದು ದಿನ ಊಟಕ್ಕೆ ಕರೆಯುತ್ತೇನೆ ಎಂದಿದ್ದಾರೆ.

Leave a Reply

Your email address will not be published. Required fields are marked *