ಮಂಡ್ಯ : ಮಾಜಿ ಸಂಸದ ಡಿ.ಕೆ.ಸುರೇಶ್ ತಂಗಿ ಎಂದು ಹೇಳಿಕೊಂಡು 9 ಕೋಟಿ ರೂ. ಮೌಲ್ಯದ ಚಿನ್ನ ಪಡೆದು ವಂಚಿಸಿದ ಆರೋಪ ಎದುರಿಸುತ್ತಿರುವ ಐಶ್ವರ್ಯಗೌಡ, ತನಗೆ ಮಾಜಿ ಸಿಎಂ ಕುಮಾರಸ್ವಾಮಿಯ ಪತ್ನಿ ಅನಿತಾ ಕುಮಾರಸ್ವಾಮಿ ಹಾಗೂ ಪುತ್ರ ನಿಖಿಲ್ ಕುಮಾರಸ್ವಾಮಿಯೂ ಬಹಳಷ್ಟು ಪರಿಚಿತರು ಎಂದು ಹೇಳಿಕೊಂಡಿರುವುದು ಬೆಳಿಕಿಗೆ ಬಂದಿದೆ.
ಪೂರ್ಣಿಮಾ ಎಂಬವರಿಂದ 100 ಗ್ರಾಂ ಚಿನ್ನದ ಜೊತೆ 15 ಲಕ್ಷ ರೂ. ಹಣ ಪಡೆದು ವಂಚಿಸಿದ ಆರೋಪ ಐಶ್ವರ್ಯ ಮೇಲಿದೆ. ಇಂದು ನಾಳೆ ವಾಪಸ್ಸು ಕೊಡ್ತೀನಿ ಎಂದು ಸತಾಯಿಸಿದ್ದಾಳೆ. ಅಲ್ಲದೇ ಹಣ ಪಡೆಯುವ ಮುನ್ನ ನಾನು ಡಿ.ಕೆ.ಸುರೇಶ್ ತಂಗಿ ಎಂದು ಐಶ್ವರ್ಯ ಪರಿಚಯ ಮಾಡಿಕೊಂಡ ಬಗ್ಗೆಯೂ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಅಷ್ಟೇ ಅಲ್ಲದೇ ತನಗೆ ಹೆಚ್‌ಡಿಕೆ ಪತ್ನಿ ಅನಿತಾ ಕುಮಾರಸ್ವಾಮಿ ಹಾಗೂ ಪುತ್ರ ನಿಖಿಲ್ ಕುಮಾರಸ್ವಾಮಿಯೂ ಬಹಳಷ್ಟು ಪರಿಚಿತರು ಎಂದು ಹೇಳಿಕೊಂಡಿದ್ದಾಳೆ. ಈ ಕುರಿತು ಐಶ್ವರ್ಯಗೌಡ ವಿರುದ್ಧ ಮಂಡ್ಯ ಪೂರ್ವ ಠಾಣೆಯಲ್ಲಿ ರವಿಕುಮಾರ್ ಹಾಗೂ ಪೂರ್ಣಿಮಾ ಸಲ್ಲಿಸಿರುವ ದೂರಿನಲ್ಲಿ ಉಲ್ಲೇಖವಾಗಿದೆ.
ಅನಿತಾ ಕುಮಾರಸ್ವಾಮಿ, ನಿಖಿಲ್ ಇಬ್ಬರೂ ಬಹಳಷ್ಟು ಪರಿಚಿತರು. ನಿಮಗೆ ಅವರ ಕಡೆಯಿಂದ ಸಹಾಯ ಬೇಕಿದ್ರೆ ನನಗೆ ಹೇಳಿ. ನಾನು ನಿಮಗೆ ಸಹಾಯ ಮಾಡ್ತೇನೆ ಎಂದು ಐಶ್ವರ್ಯಗೌಡ ಹೇಳಿದ್ದಾಳೆ. ಆ ರೀತಿ ಹೇಳಿ ನಮ್ಮನ್ನ ನಂಬಿಸಿ ನಮ್ಮ ಬಳಿ ಹಂತ ಹಂತವಾಗಿ 40 ಲಕ್ಷ ರೂ. ಹಾಗೂ ಪೂರ್ಣಿಮಾ ಬಳಿಯೂ ಹಣ, ಚಿನ್ನ ಪಡೆದಿದ್ದಳು. ಈಗ ಹಣ ವಾಪಸ್ಸು ನೀಡದೇ ಮೋಸ ಮಾಡಿದ್ದಾಳೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಐಶ್ವರ್ಯ ಕಾಂಗ್ರೆಸ್ ನಾಯಕರ ಹೆಸರನ್ನಷ್ಟೇ ಅಲ್ಲ ಜೆಡಿಎಸ್ ಹೆಸರನ್ನೂ ದುರುಪಯೋಗ ಪಡಿಸಿಕೊಂಡಿದ್ದಾಳೆ ಎಂಬುದು ತಿಳಿದು ಬಂದಿದೆ.