ಪುಟ್ಟಗೌರಿ ಮದುವೆ, ಕನ್ನಡತಿ ಸೀರಿಯಲ್‌ಗಳ ಮೂಲಕ ಗಮನ ಸೆಳೆದ ಪ್ರತಿಭಾನ್ವಿತ ನಟಿ ರಂಜನಿ ರಾಘವನ್ ನಿರ್ದೇಶನದತ್ತ ಮುಖ ಮಾಡಿದ್ದಾರೆ. ಹೊಸ ವರ್ಷದಂದು ನಿರ್ದೇಶನ ಮಾಡುತ್ತಿರುವ ಕುರಿತು ಫ್ಯಾನ್ಸ್‌ಗೆ ಗುಡ್ ನ್ಯೂಸ್ ಹಂಚಿಕೊಂಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ನಟಿ ಪೋಸ್ಟ್ ಮಾಡಿದ್ದಾರೆ.

ಹೊಸ ವರ್ಷದ ದಿನ ನನ್ನ ಹೊಸ ಕೆಲಸದ ಬಗ್ಗೆ ಹೇಳಿಕೊಳ್ಳಲು ಭಯ ಉತ್ಸಾಹ ಎರಡೂ ಇದೆ. ಈ ಹಿಂದೆ ಬರವಣಿಗೆ ಮತ್ತು ನಟನೆಯ ಮೂಲಕ ಕಥೆಗಳನ್ನ ತಲುಪಿಸೋ ಪ್ರಯತ್ನ ಮಾಡಿದ್ದೇನೆ. ಈಗ ಮೊದಲ ಬಾರಿಗೆ ಕಥೆಯೊಂದನ್ನ ದೊಡ್ಡ ಪರದೆಯ ಮೇಲೆ ನಿಮಗೆ ತೋರಿಸುವತ್ತ ಕೆಲಸ ನಡೆದಿದೆ. ಹೊಸ ಕೆಲಸ ಅನ್ನುವುದಕ್ಕಿಂತ ಸಿನಿಮಾ ನಿರ್ದೇಶಕಿ ಆಗಬೇಕೆಂಬ ಕನಸು ಹೊತ್ತು ಬಹಳ ವರ್ಷಗಳೇ ಸರಿದಿದೆ.

ಈ ಕತೆ ಹುಟ್ಟಿ ಎರಡು ವರ್ಷಗಳಾಗಿವೆ. ಒಂದೂವರೆ ವರ್ಷದಿಂದ ಇದರ ಚಿತ್ರಕತೆಯನ್ನ ಬರೆದು ತಿದ್ದಿದ್ದೇನೆ. ಚಿತ್ರರಂಗದ ಹಲವಾರು ಜನರ ಸಹಾಯ ಪ್ರೋತ್ಸಾಹದಿಂದ, ನಮ್ಮ ನಿರ್ಮಾಪಕರಾದ ಡಾ.ಆನಂದ್ ಮತ್ತು ರಾಮಕೃಷ್ಣ ಸುಬ್ರಮಣ್ಯಂ ಅವರ ಸಹಕಾರದಿಂದ ನಮ್ಮ ಸಿನಿಮಾ ಬಗ್ಗೆ ಮಾತನಾಡುವ ಧೈರ್ಯ ಬಂದಿದೆ ಎಂದು ಬರೆದುಕೊಂಡಿದ್ದಾರೆ.

ಈ ಪಯಣದಲ್ಲಿ ಮುಖ್ಯವಾಗಿ ನನಗೆ ಶಕ್ತಿಯಾಗಿರುವವರು Maestro ಇಸೈಜ್ಞಾನಿ ಇಳಯರಾಜ ಸರ್. 1000 ಹೆಚ್ಚು ಚಿತ್ರಕ್ಕೆ ಸಂಗೀತ ನೀಡಿರುವವರು ನನ್ನ ಕತೆಯನ್ನ ಮೆಚ್ಚಿ ಜೊತೆಗೆ ನಿಂತಿದ್ದಾರೆ. ಸೆ. 13ರಂದು 2023ರ ವೇಳೆ ಅವರನ್ನ ಭೇಟಿ ಆಗಿ ಕತೆ ಹೇಳುವ ಅದೃಷ್ಟ ಸಿಕ್ಕಾಗ ಚೆನ್ನೈಗೆ ಹೋಗಿ ಅವರನ್ನ ಭೇಟಿ ಆಗಿ, ಕಾಲಿಗೆ ಬಿದ್ದು ಒಂದು ಫೋಟೋ ತೆಗೆಸಿಕೊಂಡು ಬಂದ್ರೆ ಅದೇ ದೊಡ್ಡದು ಅಂತಷ್ಟೇ ಅಂದುಕೊಂಡಿದ್ದು. ಕನ್ನಡದಲ್ಲಿ ಕಥೆ ಹೇಳಮ್ಮ, ಕನ್ನಡ ನನಗೆ ಚೆನ್ನಾಗಿ ಬರುತ್ತೆ ಕೊಲ್ಲೂರು ಮೂಕಾಂಬಿಕೆ ನನ್ನವ್ವ ಎಂದು ಮಾತು ಶುರು ಮಾಡಿದವರು ಮೂರೇ ದಿನದಲ್ಲಿ ಕಥೆ ನನ್ನ ಮನಸ್ಸಿಗೆ ಬಹಳ ಹತ್ತಿರವಾಗಿದೆ ಎಂದು ತಿಳಿಸಿ ನಮ್ಮ ಸಿನಿಮಾದ ಭಾಗವಾಗಿ, ಇವತ್ತಿಗೆ ಇಳಯರಾಜ ಸರ್ ನಮಗೆ ‘ಒನ್ ಕಾಲ್ ಅವೇ’ ಅನ್ನೋ ಜಂಭ ಹುಟ್ಟಿಸಿದ್ದಾರೆ.

ಹೋದ ವರ್ಷ 2024 ಜನವರಿ ಒಂದು ನನ್ನ ಹೊಸ ಕನಸಿನ ಬಗ್ಗೆ ಪೋಸ್ಟ್ ಹಾಕಿದ್ದರೂ ಅದೇನೆಂದು ಹೇಳಲು 2025 ಬರಬೇಕಾಯಿತು. ಸಿನಿಮಾ ಮಾಡುವಾಗ ಎಲ್ಲವೂ ಅಂದುಕೊಂಡಂತೆ ನಡೆಯುವುದಿಲ್ಲ ಅನ್ನುವುದು ಇಲ್ಲಿಯ ತನಕ ಕಲಿತ ಪಾಠವಾದರೂ ಒಳ್ಳೆಯ ಸಿನಿಮಾ ಆಗಲು ಅದಕ್ಕೇನು ಬೇಕೋ ಅದೇ ಪಡೆದುಕೊಳ್ಳುತ್ತದೆ ಅನ್ನೋ ನಂಬಿಕೆಯೂ ಅಚಲವಾಗಿದೆ. ಕನ್ನಡಿಗರ ಆಶೀರ್ವಾದ, ಸಹಕಾರವನ್ನ ಬೇಡುತ್ತಾ ಮುನ್ನಡೆಯುತ್ತಿದ್ದೇನೆ ಎಂದು ಹೇಳಿದ್ದಾರೆ. ನಿಮ್ಮೆಲ್ಲರಿಗೂ ರಾಶಿ ಪ್ರೀತಿ ಎಂದು ನಟಿ ಬರೆದುಕೊಂಡಿದ್ದಾರೆ.

Leave a Reply

Your email address will not be published. Required fields are marked *