ಟಾಲಿವುಡ್ನ ಸ್ಟಾರ್ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರಿಗೆ ಈಗ ಸಂಕಷ್ಟ ಎದುರಾಗಿದೆ. ಚೆಕ್ ಬೌನ್ಸ್ ಕೇಸ್ನಲ್ಲಿ ಅವರಿಗೆ ಮುಂಬೈನ ಸ್ಥಳೀಯ ಕೋರ್ಟ್ ಮೂರು ತಿಂಗಳ ಜೈಲು ಶಿಕ್ಷೆ ವಿಧಿಸಿದೆ. ತೀರ್ಪು ಇದ್ದಿದ್ದರಿಂದ ರಾಮ್ ಗೋಪಾಲ್ ವರ್ಮಾ ಕೋರ್ಟ್ಗೆ ಹಾಜರಿ ಹಾಕಬೇಕಿತ್ತು. ಆದರೆ, ರಾಮ್ ಗೋಪಾಲ್ ವರ್ಮಾ ಕೋರ್ಟ್ಗೆ ಬರಲೇ ಇಲ್ಲ. ಹೀಗಾಗಿ, ಅವರ ವಿರುದ್ಧ ಜಾಮೀನು ರಹಿತ ವಾರಂಟ್ ಹೊರಡಿಸಲಾಗಿದೆ.
2018ರಲ್ಲಿ ಮುಂಬೈನಲ್ಲಿ ರಾಮ್ ಗೋಪಾಲ್ ವರ್ಮಾ ವಿರುದ್ಧ ಚೆಕ್ ಬೌನ್ಸ್ ಪ್ರಕರಣ ದಾಖಲಾಗಿತ್ತು. ಆ ಸಮಯದಲ್ಲಿ ಮಹೇಶ್ಚಂದ್ರ ಮಿಶ್ರಾ ಎಂಬ ವ್ಯಕ್ತಿ ರಾಮಗೋಪಾಲ್ ವರ್ಮಾ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದರು. ಹಲವು ಬಾರಿ ನ್ಯಾಯಾಲಯಕ್ಕೆ ಹಾಜರಾಗುವಂತೆ ಆರ್ಜಿವಿಗೆ ನೋಟಿಸ್ ನೀಡಿದರೂ ಅವರು ಕೋರ್ಟ್ಗೆ ಬಂದಿರಲಿಲ್ಲ. ಅವರ ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿ ಮಾಡಲಾಗಿದೆ.
ಮುಂದಿನ ಮೂರು ತಿಂಗಳಲ್ಲಿ ದೂರುದಾರರಿಗೆ ರೂ.3.72 ಲಕ್ಷ ಪರಿಹಾರ ನೀಡುವಂತೆ ಆದೇಶಿಸಿದೆ. ಪರಿಹಾರವನ್ನು ಪಾವತಿಸಲು ವಿಫಲವಾದಲ್ಲಿ, ಮ್ಯಾಜಿಸ್ಟ್ರೇಟ್ ನ್ಯಾಯಾಲಯವು 3 ತಿಂಗಳ ಸಾದಾ ಜೈಲು ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ ಎಂದು ಆದೇಶದಲ್ಲಿ ತಿಳಿಸಿದೆ.