ಭುವನೇಶ್ವರ : ಪುರಿಯ ಜಗನ್ನಾಥ ದೇವಾಲಯದ ಮೇಲೆ ಇಂದು ಡ್ರೋನ್ ಹಾರಾಟ ನಡೆಸಿದ್ದು, ಈ ಹಿನ್ನೆಲೆ ತನಿಖೆಗಾಗಿ ತಂಡವನ್ನು ರಚಿಸಿದೆ. ಇಂದು ದೇವಸ್ಥಾನದ ಮೇಲೆ ಡ್ರೋನ್ ಹಾರಾಟ ನಡೆಸಿದ್ದು, ಸುಮಾರು ಅರ್ಧಗಂಟೆಗಳ ಕಾಲ ಹಾರಾಡಿದೆ. ಇದರಿಂದ ಭಯದ ವಾತಾವರಣ ಸೃಷ್ಟಿಯಾಗಿದ್ದು, ದೇವಾಲಯದ ಸುತ್ತಮುತ್ತ ಪೊಲೀಸ್ ಭದ್ರತೆಯನ್ನು ನಿಯೋಜಿಸಲಾಗಿದೆ.
ಈ ಕುರಿತು ಕಾನೂನು ಸಚಿವ ಪೃಥ್ವಿರಾಜ್ ಹರಿಚಂದನ್ ಮಾತನಾಡಿ, ದೇವಸ್ಥಾನದ ಮೇಲೆ ಡ್ರೋನ್ ಹಾರಿಸುವುದು ಕಾನೂನುಬಾಹಿರ ಮತ್ತು ಸ್ವೀಕಾರಾರ್ಹವಲ್ಲ, ಭದ್ರತೆಯನ್ನು ಉಲ್ಲಂಘಿಸಿದ ವ್ಯಕ್ತಿಯ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು. ಸಂಬಂಧಪಟ್ಟ ವ್ಯಕ್ತಿಯನ್ನು ಪತ್ತೆ ಹಚ್ಚಿ, ಡ್ರೋನ್ ಅನ್ನು ವಶಪಡಿಸಿಕೊಳ್ಳಲಾಗುವುದು. ಇದಕ್ಕೆ ಸಂಬಂಧಿಸಿದಂತೆ ಪುರಿ ಎಸ್‌ಪಿ ತಂಡಗಳನ್ನು ರಚಿಸಿ, ತನಿಖೆಯನ್ನು ಪ್ರಾರಂಭಿಸಿದ್ದಾರೆ ಎಂದರು.
ದೇವಾಲಯವು ಡ್ರೋನ್ ಹಾರಾಟ ನಿಷೇಧ ವಲಯವಾಗಿರುವುದರಿಂದ ಭದ್ರತೆಯನ್ನು ಹೆಚ್ಚಿಸಿದೆ. ಭವಿಷ್ಯದಲ್ಲಿ ಇಂತಹ ಘಟನೆ ನಡೆಯದಂತೆ ನೋಡಿಕೊಳ್ಳಲು ದೇವಸ್ಥಾನದ ಸುತ್ತಲಿನ ನಾಲ್ಕು ಕಾವಲು ಗೋಪುರಗಳಲ್ಲಿ 24 ಗಂಟೆಯೂ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲು ಸರ್ಕಾರ ಯೋಜಿಸುತ್ತಿದೆ. ಯಾರೋ ಒಬ್ಬ ವ್ಲಾಗರ್ ಡ್ರೋನ್ ಅನ್ನು ದೇವಸ್ಥಾನದ ಮೇಲೆ ಹಾರಿಸಿರಬಹುದು ಎಂದು ಶಂಕಿಸಲಾಗಿದೆ. ಆದರೆ ತನಿಖೆ ನಡೆಸಿ, ಅದರ ಹಿಂದಿನ ಉದ್ದೇಶ ತಿಳಿದುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.