Eenadu Editorial: ಸಮರ್ಥ ಪ್ರತಿಪಕ್ಷ ಮತ್ತು ಐತಿಹಾಸಿಕ ಅಗತ್ಯ!
ಒಂದು ದೇಶ ಸಮೃದ್ಧವಾಗಲು ಹಾಗೂ ಆ ರಾಷ್ಟ್ರದ ಪ್ರಜಾಪ್ರಭುತ್ವದ ಉಳಿವಿಗೆ ಸಮರ್ಥ ಪ್ರತಿಪಕ್ಷದ ಅಗತ್ಯತೆ ಇದೆ. ಕಳೆದ 9 ವರ್ಷಗಳಿಂದ ಮಂಕಾಗಿರುವ ಪ್ರತಿಪಕ್ಷಗಳು ಒಗ್ಗಟ್ಟಿನಿಂದ ಆಡಳಿತ ಪಕ್ಷದ ವಿರುದ್ಧ ಹೋರಾಡಬೇಕಿದೆ. ಈ ಬಗ್ಗೆ ಈನಾಡು ಎಡಿಟೋರಿಯಲ್ ಹೇಳುವುದು ಹೀಗೆ
ಒಂದು ಕೈಯಿಂದ ಚಪ್ಪಾಳೆ ತಟ್ಟಲು ಸಾಧ್ಯವಾಗಲ್ಲ. ಬಲವಾದ ಮತ್ತು ವಿಶ್ವಾಸಾರ್ಹ ವಿರೋಧಪಕ್ಷ ಇಲ್ಲದೇ ದೇಶವನ್ನು ಪ್ರಜಾಸತ್ತಾತ್ಮಕ ರಾಷ್ಟ್ರ ಎಂದು ಪರಿಗಣಿಸಲಾಗುವುದಿಲ್ಲ. ಸರ್ಕಾರದ ಧೋರಣೆಗಳು ಹಾಗೂ ನಿರಂಕುಶಾಧಿಕಾರವನ್ನು ತಪ್ಪಿಸಲು ಒಂದು ಗಟ್ಟಿಯಾದ ಪ್ರತಿಪಕ್ಷ ಬೇಕೇಬೇಕು. ಇದು ಡಾ.ಬಿ.ಆರ್.ಅಂಬೇಡ್ಕರ್ ಅವರ ಆಶಯವೂ ಆಗಿತ್ತು. ಇದು ನಿಜವಾದ ಪ್ರಜಾಪ್ರಭುತ್ವದ ವಿಶಿಷ್ಟ ಅಭಿಪ್ರಾಯಗಳ ತಾತ್ಪರ್ಯವೂ ಹೌದು. ಕಳೆದ ಎರಡು ಸಾರ್ವತ್ರಿಕ ಚುನಾವಣೆಗಳಲ್ಲಿ ಬಿಜೆಪಿಯ ಅಬ್ಬರದಿಂದಾಗಿ ರಾಷ್ಟ್ರಮಟ್ಟದಲ್ಲಿ ಪ್ರತಿಪಕ್ಷಗಳು ಏನೂ ಮಾಡಲು ಸಾಧ್ಯವಾಗಿಲ್ಲ ಎಂಬುದು ವಾಸ್ತವವೂ ಹೌದು.
ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲು ವಿರೋಧ ಪಕ್ಷಗಳು ಒಂದಾಗಬೇಕಿದೆ ಎಂಬ ಚರ್ಚೆ ಕೆಲ ದಿನಗಳಿಂದ ನಡೆಯುತ್ತಲೇ ಇದೆ. ಈ ಚರ್ಚೆ ಒಂದು ಹಂತಕ್ಕೆ ಬಂದು ನಿಲ್ಲಲು ಬಿಹಾರ ಸಿಎಂ ನಿತೀಶ್ ಕುಮಾರ್ ಕಾರಣವಾಗುತ್ತಿದ್ದಾರೆ. ಅಷ್ಟರಮಟ್ಟಿಗೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ , ಪ್ರತಿಪಕ್ಷಗಳನ್ನು ಒಂದೇ ವೇದಿಕೆಗೆ ಕರೆತರುವ ಹೊಣೆ ಹೊತ್ತು ಕಾರ್ಯಮಗ್ನವಾಗಿದ್ದಾರೆ. ಕೆಲ ದಿನಗಳಿಂದ ವಿವಿಧ ಪಕ್ಷಗಳ ಪ್ರಮುಖರನ್ನು ಭೇಟಿ ಮಾಡಿ ಮೈತ್ರಿ ಮಾಡಿಕೊಳ್ಳುವ ಕುರಿತು ಚರ್ಚೆ ನಡೆಸುತ್ತಿದ್ದಾರೆ. ಇದರ ಫಲವಾಗಿ ನಾಳೆ ಪಾಟ್ನಾದಲ್ಲಿ ಪ್ರಮುಖ ವಿರೋಧ ಪಕ್ಷಗಳ ಸಭೆ ನಡೆಯಲಿದೆ.
ಪ್ರತಿಪಕ್ಷಗಳ ಒಗ್ಗಟ್ಟು ಮೆಚ್ಚುವಂತಿದ್ದರೂ ಹಲವು ರಾಜ್ಯಗಳಲ್ಲಿ ಪ್ರತಿಸ್ಪರ್ಧಿಗಳ ನಡುವೆ ಸಮನ್ವಯತೆ ಸಾಧ್ಯವೇ ಎಂಬ ಅನುಮಾನ ಮೂಡಿದೆ. ಅದೇ ರೀತಿ, ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್ ಸಿಪಿಐ(ಎಂ) ಜೊತೆ ಕೈಜೋಡಿಸಿದರೆ ಲೋಕಸಭೆ ಕದನದಲ್ಲಿ ಪಕ್ಷಕ್ಕೆ ನೆರವಾಗುವುದಿಲ್ಲ ಎಂದು ತೃಣಮೂಲ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ತೀರ್ಮಾನಿಸಿದ್ದಾರೆ.
ಈಗಾಗಲೇ ರಾಜಸ್ಥಾನದಲ್ಲಿ ಚುನಾವಣಾ ಪ್ರಚಾರ ಆರಂಭಿಸಿರುವ ‘ಎಎಪಿ’ ನಾಯಕ ಅರವಿಂದ್ ಕೇಜ್ರಿವಾಲ್, ಅಲ್ಲಿನ ಆಡಳಿತ ಪಕ್ಷ ಕಾಂಗ್ರೆಸ್ ಅನ್ನು ಟೀಕಿಸಿದ್ದಾರೆ. ಬಿಜೆಪಿಯನ್ನು ಸೋಲಿಸಲು ಬಯಸುವ ಎಲ್ಲ ಪಕ್ಷಗಳು ತಮ್ಮ ಬೆನ್ನಿಗೆ ನಿಲ್ಲುವಂತೆ ಸಮಾಜವಾದಿ ನಾಯಕ ಅಖಿಲೇಶ್ ಯಾದವ್ ಕರೆ ನೀಡಿದ್ದಾರೆ. ಕಾಂಗ್ರೆಸ್, ಎಡಪಕ್ಷಗಳು ಮತ್ತು ಪ್ರಾದೇಶಿಕ ಪಕ್ಷಗಳು ತಮ್ಮ ಹಿತಾಸಕ್ತಿಗಳನ್ನು ಕಾಯ್ದುಕೊಳ್ಳುವ ಸಮಯದಲ್ಲಿ, ಇವರನ್ನೆಲ್ಲ ಒಂದು ಮಾಡುವ ನಿತೀಶ್ ಕುಮಾರ್ ಅವರ ಗುರಿ ಈಡೇರುತ್ತದೆಯೇ? ಅವರ ಮಹತ್ವಾಕಾಂಕ್ಷೆಯನ್ನು ಸಾಬೀತುಪಡಿಸುವಲ್ಲಿ ಪಾಟ್ನಾ ಸಭೆ ಯಶಸ್ವಿಯಾಗುತ್ತದೆಯೇ? ಎಂಬುದು ಈಗಿರುವ ಪ್ರಶ್ನೆ. ಅಂದ ಹಾಗೆ ನಾಳೆ ಈ ಮಹತ್ವದ ಸಭೆ ನಡೆಯಲಿದೆ. ಈಗಾಗಲೇ ಕೆಲ ಪ್ರಮುಖ ನಾಯಕರು ಪಾಟ್ನಾಕ್ಕೆ ಆಗಮಿಸಿದ್ದಾರೆ.
ಒಂಬತ್ತು ವರ್ಷಗಳ ಹಿಂದೆ ನಡೆದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಶೇ.31.34 ರಷ್ಟು ಮತಗಳೊಂದಿಗೆ 282 ಸ್ಥಾನಗಳನ್ನು ಗೆದ್ದುಕೊಂಡಿತ್ತು. 2019ರಲ್ಲಿ ಶೇ.37.7ರಷ್ಟು ಮತಗಳನ್ನು ಪಡೆದು 303 ಸ್ಥಾನಗಳನ್ನು ಗಳಿಸಿತ್ತು. ವಿರೋಧ ಪಕ್ಷಗಳೆಲ್ಲ ಸೇರಿ ಮತ ವಿಭಜನೆ ತಡೆಯಲು ಸಾಧ್ಯವಾದರೆ ಬಿಜೆಪಿಯ ಜೈತ್ರಯಾತ್ರೆ ತಡೆಯುವುದು ಅಸಾಧ್ಯವೇನಲ್ಲ ಎಂಬ ನಿರೀಕ್ಷೆಯಲ್ಲಿ ವಿಪಕ್ಷಗಳ ಮೈತ್ರಿಯ ಕಲ್ಪನೆ ಅರಳಿದೆ. ಕರ್ನಾಟಕದಲ್ಲಿ ಗೆಲುವಿನ ಮೂಲಕ ಹೊಸ ಉತ್ಸಾಹ ತಂದಿರುವ ಕಾಂಗ್ರೆಸ್ ಪಕ್ಷ, ವಿರೋಧ ಪಕ್ಷದ ಪಾಳಯಕ್ಕೆ ಆಧಾರ ಸ್ತಂಭವಾಗಲು ಬಯಸಿದೆ.
ಕರ್ನಾಟಕ, ರಾಜಸ್ಥಾನ, ಹಿಮಾಚಲ ಪ್ರದೇಶ ಮತ್ತು ಛತ್ತೀಸ್ಗಢದಲ್ಲಿ ತನ್ನ ಸರ್ಕಾರಗಳನ್ನು ನಡೆಸುತ್ತಿರುವ ಕಾಂಗ್ರೆಸ್, ತಮಿಳುನಾಡು, ಬಿಹಾರ ಮತ್ತು ಜಾರ್ಖಂಡ್ನ ಸಮ್ಮಿಶ್ರ ಸರ್ಕಾರಗಳಲ್ಲಿ ಪಾಲುದಾರ ಪಕ್ಷವಾಗಿದೆ. ಹಿಂದಿನ ಮಧ್ಯಪ್ರದೇಶ ಚುನಾವಣೆಯಲ್ಲಿ ಶೇಕಡಾ 40 ಕ್ಕಿಂತ ಹೆಚ್ಚು ಮತಗಳನ್ನು ಗಳಿಸಿದ ಕಾಂಗ್ರೆಸ್ ಪಕ್ಷವು, ಗುಜರಾತ್ ವಿಧಾನಸಭೆಯಲ್ಲಿ ಶೇಕಡಾ 27 ರಷ್ಟು ಮತದಾರರ ಒಲವು ಗಳಿಸಿಕೊಂಡಿದೆ. ಇನ್ನು ಕೆಲವು ರಾಜ್ಯಗಳಲ್ಲಿ ಪಕ್ಷದ ತಳಹದಿ ಇನ್ನೂ ಭದ್ರವಾಗಿಯೇ ಇದೆ. 2014 ಮತ್ತು 2019ರ ಲೋಕಸಭೆ ಚುನಾವಣೆಯಲ್ಲಿ ಶೇ.19.5ಕ್ಕೂ ಹೆಚ್ಚು ಮತಗಳನ್ನು ಪಡೆಯುವಲ್ಲಿ ಕಾಂಗ್ರೆಸ್ ಯಶಸ್ವಿಯಾಗಿದೆ. ಆದ್ದರಿಂದ ವಿರೋಧ ಪಕ್ಷಗಳ ಒಗ್ಗಟ್ಟನ್ನು ಬಯಸುವ ಯಾವುದೇ ಪ್ರಾದೇಶಿಕ ರಾಜಕೀಯ ಶಕ್ತಿಗಳು ಕಾಂಗ್ರೆಸ್ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಬೇಕಾದ ಅಗತ್ಯತೆ ಇದೆ.
ಪ್ರಬಲ ಪ್ರತಿಪಕ್ಷ ಈಗಿನ ಅಗತ್ಯ: ಸಕಾಲದಲ್ಲಿ ಸರ್ಕಾರದ ತಪ್ಪುಗಳನ್ನು ಎತ್ತಿ ತೋರಿಸುವ ಸಮರ್ಥ ಪ್ರತಿಪಕ್ಷ ಭಾರತಕ್ಕೆ ಐತಿಹಾಸಿಕ ಅಗತ್ಯವಾಗಿದೆ. ಇಂತಹ ವಿರೋಧ ಪಕ್ಷದ ಮೈತ್ರಿಗೆ ಜೀವ ತುಂಬಲು ಸಮಾನ ಮನಸ್ಕ ರಾಜಕೀಯ ಪಕ್ಷಗಳ ಕೈ ಜೋಡಿಸುವುದು ದೇಶದ ಏಳಿಗೆ ದೃಷ್ಟಿಯಿಂದ ಉತ್ತಮವೂ ಹೌದು. ಅದಕ್ಕಾಗಿ ಕಾಂಗ್ರೆಸ್ ಮತ್ತು ಪ್ರಾದೇಶಿಕ ಪಕ್ಷಗಳು ಪರಸ್ಪರ ಹೊಂದಾಣಿಕೆ ಪ್ರವೃತ್ತಿಯೊಂದಿಗೆ ಸಮಾನ ದೃಷ್ಟಿಕೋನದಿಂದ ಕಾರ್ಯನಿರ್ವಹಿಸಬೇಕು. ತಾವು ಅಧಿಕಾರಕ್ಕೆ ಬಂದರೆ ಜನ ಸಾಮಾನ್ಯರ ಬದುಕನ್ನು ಬಾಧಿಸುತ್ತಿರುವ ಹಲವಾರು ಸಮಸ್ಯೆಗಳನ್ನು ಎಷ್ಟು ಉತ್ತಮವಾಗಿ ಪರಿಹರಿಸಬಹುದು ಎಂಬುದನ್ನು ಮೈತ್ರಿಕೂಟದ ನಾಯಕರು ಮೊದಲು ಬಹಿರಂಗಪಡಿಸಬೇಕು. ಭಾರತೀಯ ಒಕ್ಕೂಟವನ್ನು ಬಲಪಡಿಸುವುದು, ಸಾಯುತ್ತಿರುವ ಪ್ರಜಾಪ್ರಭುತ್ವ ವ್ಯವಸ್ಥೆಗಳ ಹೊಳಪನ್ನು ಮರುಸ್ಥಾಪಿಸುವುದು ಇತ್ಯಾದಿಗಳ ಕುರಿತು ಅವರು ತಮ್ಮ ಆಲೋಚನೆಗಳನ್ನು ಜನರ ಮುಂದಿಡಬೇಕು. ಈ ಸಂಬಂಧ ತಮ್ಮ ಕಾರ್ಯಸೂಚಿ ಏನು ಎಂಬುದನ್ನ ಜನರಿಗೆ ಅರಿಕೆ ಮಾಡಿಕೊಡಬೇಕು.
ಈಗ ಒಗ್ಗೂಡಲು ಮುಂದಾಗಿರುವ ಪ್ರತಿಪಕ್ಷಗಳು ಕೂಲಂಕಷ ಚರ್ಚೆಗಳೊಂದಿಗೆ ಕನಿಷ್ಠ ಸಾಮಾನ್ಯ ಕಾರ್ಯಕ್ರಮವನ್ನು ರಚಿಸಬೇಕು. ಮತ್ತು ‘ನಾನು ಭವಿಷ್ಯದ ಪ್ರಧಾನಿ’ ಎಂದು ಭಾವಿಸುವ ಯಾರಿಗೂ ಭರವಸೆಯ ಮೇಲಾವರಣವನ್ನು ನಿರ್ಮಿಸಬಾರದು. ಪಾಲುದಾರರ ಸಾಮೂಹಿಕ ಒಪ್ಪಿಗೆಯೊಂದಿಗೆ ಮೈತ್ರಿಕೂಟದ ನಾಯಕತ್ವವನ್ನು ಆಯ್ಕೆ ಮಾಡಬೇಕು. ಚುನಾವಣೆಯ ಸಮಯ ಸಮೀಪಿಸುವ ಮೊದಲು ಸಂಸತ್ತಿನ ವೇದಿಕೆಯಲ್ಲಿ ವಿವಿಧ ವಿಷಯಗಳ ಬಗ್ಗೆ ಒಂದೇ ಧ್ವನಿಯಲ್ಲಿ ಪ್ರತಿಕ್ರಿಯಿಸುವ ಮೂಲಕ ತಮ್ಮ ಒಗ್ಗಟ್ಟು ಮತ್ತು ಸಮರ್ಪಣೆಯನ್ನು ಜನರಿಗೆ ವ್ಯಕ್ತಪಡಿಸಬೇಕು. ಆ ಮಟ್ಟಿಗೆ ವಿರೋಧ ಪಕ್ಷಗಳು ಜವಾಬ್ದಾರಿಯುತವಾಗಿ ನಡೆದುಕೊಂಡರೆ ಮಾತ್ರ ಜನ ವಿಶ್ವಾಸ ಗಳಿಸಲು ಸಾಧ್ಯ!