ಬೆಂಗಳೂರು : ಬೆಂಗಳೂರಿನ ರಾಜರಾಜೇಶ್ವರಿ ನಗರ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನ ಮೇಲಿನ ಮೊಟ್ಟೆ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ನಂದಿನಿ ಲೇಔಟ್ ಪೊಲೀಸರು ಬಂಧಿಸಿದ್ದು, ಇದೀಗ ಆ ಮೂವರು ಆರೋಪಿಗೆ ಜಾಮೀನು ಸಿಕ್ಕಿದೆ. ಈ ಬಂಧನಕ್ಕೊಳಗಾಗಿದ್ದ ಚಂದ್ರು, ವಿಶ್ವನಾಥ್, ಕೃಷ್ಣಮೂರ್ತಿಗೆ ಬೆಂಗಳೂರಿನ 32ನೇ ಎಸಿಎಂಎಂ ನ್ಯಾಯಾಲಯ ಷರತ್ತುಬದ್ಧ ಜಾಮೀನು ನೀಡಿ ಆದೇಶ ಹೊರಡಿಸಿದೆ.

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನದ ಪ್ರಯುಕ್ತ ನಗರದ ಕಂಠೀರವ ಸ್ಟುಡಿಯೋ ಬಳಿ ಡಿ.25 ರಂದು ಶಾಸಕ ಮುನಿರತ್ನ ಅವರ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಕಾರ್ಯಕ್ರಮ ಆಯೋಜಿಸಿದ್ದರು. ಈ ಸಂದರ್ಭದಲ್ಲಿ ಮುನಿರತ್ನ ಅವರ ತಲೆಗೆ ಮೊಟ್ಟೆ ಎಸೆದಿದ್ದರು. ಇದರ ಬೆನ್ನಲ್ಲೇ ನಂದಿನ ಲೇಔಟ್ ಠಾಣೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದರು.

ತಮ್ಮ ಮೇಲಿನ ಮೊಟ್ಟೆ ದಾಳಿಗೆ ಸಂಬಂಧಿಸಿದಂತೆ ಶಾಸಕ ಮುನಿರತ್ನ ಅವರು ದೂರು ನೀಡಿದ್ದು, ಈ ದೂರಿನ ಮೇರೆಗೆ ನಂದಿನಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿದೆ. ತಮ್ಮನ್ನು ಹತ್ಯೆ ಮಾಡುವ ಸಂಚಿನ ಮುಂದುವರೆದ ಭಾಗವಾಗಿ ಮೊಟ್ಟೆ ಎಸೆಯಲಾಗಿದೆ ಎಂದು ಶಾಸಕ ಮುನಿರತ್ನ ದೂರು ನೀಡಿದ್ದರು. ಇದಕ್ಕೆ ಪ್ರತಿಯಾಗಿ ಮೊಟ್ಟೆ ಎಸೆದವ ಎಂದು ಆರೋಪ ಎದುರಿಸುತ್ತಿರುವವರೂ ಸಹ ಪ್ರತಿದೂರು ನೀಡಿದ್ದಾರೆ. ಮುನಿರತ್ನ ಅವರ ಬೆಂಬಲಿಗರೇ ಗುಂಪು ಕಟ್ಟಿಕೊಂಡು ನಮ್ಮ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ದೂರು ದಾಖಲಿಸಿದ್ದಾರೆ.

Leave a Reply

Your email address will not be published. Required fields are marked *