ವಾಷಿಂಗ್ಟನ್ : ಓಪನ್​ಎಐನಿಂದ ಚ್ಯಾಟ್​ಜಿಪಿಟಿ ಆರಂಭವಾದಾಗಿನಿಂದ ಎಲಾನ್ ಮಸ್ಕ್ ಮತ್ತು ಸ್ಯಾಮ್ ಆಲ್ಟ್​ಮ್ಯಾನ್ ನಡುವಿನ ಆನ್ಲೈನ್ ವಾಗ್ಯುದ್ಧ ಹೆಸರುವಾಸಿಯಾಗಿದೆ. ಎಲಾನ್ ಮಸ್ಕ್ ಸಾಕಷ್ಟು ಬಾರಿ ಓಪನ್ ಎಐ ಕಂಪನಿ ಹಾಗೂ ಅದರ ಸಿಇಒ ಸ್ಯಾಮ್ ಆಲ್ಟ್​ಮ್ಯಾನ್ ವಿರುದ್ಧ ಕಟುವಾಗಿ ಮಾತನಾಡಿದ್ದಿದೆ. ಇದೀಗ ಇಲಾನ್ ಮಸ್ಕ್ ನೇತೃತ್ವದಲ್ಲಿ ಹೂಡಿಕೆದಾರರ ಗುಂಪೊದು ಓಪನ್​ಎಐ ಅನ್ನು 97.4 ಬಿಲಿಯನ್ ಡಾಲರ್​ಗೆ ಖರೀದಿಸುವುದಾಗಿ ಆಫರ್ ಮಾಡಿರುವುದು ತಿಳಿದುಬಂದಿದೆ.

ಓಪನ್​ಎಐ ಸಿಇಒ ಸ್ಯಾಮ್ ಆಲ್ಟ್​ಮ್ಯಾನ್ ಅವರು ಎಕ್ಸ್​ನಲ್ಲಿ ಈ ಬಗ್ಗೆ ನೇರವಾಗಿ ಸ್ಪಂದಿಸಿದ್ದಾರೆ. ತಾವು ಬಯಸಿದರೆ ಟ್ವಿಟ್ಟರ್ ಅನ್ನು 9.74 ಬಿಲಿಯನ್ ಡಾಲರ್​ಗೆ ಖರೀದಿಸುವುದಾಗಿ ನೇರವಾಗಿ ಇಲಾನ್ ಮಸ್ಕ್ ಅವರಿಗೆ ಸ್ಯಾಮ್ ಸವಾಲು ಹಾಕಿದ್ದಾರೆ. ಇದಕ್ಕೆ ಇಲಾನ್ ಮಸ್ಕ್ ಅಷ್ಟೇ ಖಾರದ ಪ್ರತಿಕ್ರಿಯೆ ನೀಡಿದ್ದಾರೆ. ‘ಸ್ವಿಂಡ್ಲರ್’ ಎಂದು ಏಕಪದದಲ್ಲಿ ಉತ್ತರ ಕೊಟ್ಟಿದ್ದಾರೆ.

ಓಪನ್​ಎಐ ಸಂಸ್ಥೆಗೆ ಮೂಲನಿಧಿಗಳನ್ನು ಕೊಟ್ಟವರಲ್ಲಿ, ಅಂದರೆ ಸೀಡಿಂಗ್ ಫಂಡ್ ನೀಡಿದವರಲ್ಲಿ ಎಲಾನ್ ಮಸ್ಕ್ ಕೂಡ ಒಬ್ಬರು. ಸೀಡಿಂಗ್ ಫಂಡ್ ಎಂದರೆ ಒಂದು ಸಂಸ್ಥೆಯ ಆರಂಭಿಕ ಹಂತದಲ್ಲಿ ನೀಡಲಾಗುವ ಬಂಡವಾಳ. ಎಲಾನ್ ಮಸ್ಕ್ ಹೇಳುವ ಪ್ರಕಾರ ಓಪನ್​ಎಐ ಒಂದು ನಾನ್ ಪ್ರಾಫಿಟ್ ಸಂಸ್ಥೆ. ಅಂದರೆ ಲಾಭಾಪೇಕ್ಷೆ ಇಲ್ಲದ ಸಂಸ್ಥೆ. ಆದರೆ, ಚ್ಯಾಟ್​ಜಿಪಿಟಿ ಇತ್ಯಾದಿ ಹೊರತಂದು ಅದು ಕಮರ್ಷಿಯಲ್ ಆಗಿದೆ.

ಎಐ ಅನ್ನು ಮನುಕುಲದ ಒಳಿತನ್ನು ಬಿಟ್ಟು ಲಾಭಕ್ಕಾಗಿ ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಎಲಾನ್ ಮಸ್ಕ್ ಹಾಗು ಕೆಲವರು ಆರೋಪಿಸುತ್ತಿದ್ದಾರೆ. ಓಪನ್​ಎಐ ಸ್ಥಾಪನೆಯ ಮೂಲ ಉದ್ದೇಶದ ಹಾದಿ ಬಿಟ್ಟು ಹೋಗಲಾಗಿದೆ ಎನ್ನುವ ಕಾರಣಕ್ಕೆ ಸ್ಯಾಮ್ ಆಲ್ಟ್​​ಮ್ಯಾನ್ ಅವರನ್ನು ಇಲಾನ್ ಮಸ್ಕ್ ಸ್ವಿಂಡ್ಲರ್ ಅಥವಾ ವಂಚಕ ಎಂದು ಕರೆದಿರಬಹುದು.

ಇದೇ ವೇಳೆ, ವಿಶ್ವದ ಟಾಪ್ ವೆಬ್​​ಸೈಟ್​ಗಳ ಪಟ್ಟಿಯಲ್ಲಿ ಎಕ್ಸ್ ಅನ್ನು ಚ್ಯಾಟ್​ಜಿಪಿಟಿ ಹಿಂದಿಕ್ಕಿದೆ. ಚ್ಯಾಟ್​ಜಿಪಿಟಿ 6ನೇ ಸ್ಥಾನಕ್ಕೆ ಏರಿದೆ. ಎಕ್ಸ್ 7ನೇ ಸ್ಥಾನಕ್ಕೆ ಕುಸಿದಿದೆ. ಸಿಮಿಲರ್ ವೆಬ್ ಖಾತೆಯಲ್ಲಿ ಟಾಪ್-10 ವೆಬ್​ಸೈಟ್​ಗಳ ಪಟ್ಟಿ ಇದ್ದ ಪೋಸ್ಟ್​ವೊಂದನ್ನು ಸ್ಯಾಮ್ ಆಲ್ಟ್​​ಮ್ಯಾನ್ ಹಂಚಿಕೊಂಡಿದ್ದಾರೆ.

ಈ ಪಟ್ಟಿಯಲ್ಲಿ ಗೂಗಲ್ ಅಗ್ರಸ್ಥಾನದಲ್ಲಿದೆ. ಶೇ. 29.21ರಷ್ಟು ವೆಬ್ ಟ್ರಾಫಿಕ್ ಗೂಗಲ್​ಗೆ ಹೋಗುತ್ತಿದೆ. ಗೂಗಲ್ ಮತ್ತು ಯೂಟ್ಯೂಬ್ ಸೇರಿಸಿದರೆ ಅರ್ಧದಷ್ಟು ಟ್ರಾಫಿಕ್​ನ ಪಾಲು ಅವುಗಳಿಗೆ ಸಿಗುತ್ತದೆ. ಚ್ಯಾಟ್​ಜಿಪಿಟಿಗೆ ಸಿಗುತ್ತಿರುವ ಟ್ರಾಫಿಕ್ ಶೇ. 2.44 ಇದೆ. ಎಕ್ಸ್ ಶೇ. 1.92ರಷ್ಟು ಟ್ರಾಫಿಕ್ ಪಡೆಯುತ್ತಿದೆ.

Leave a Reply

Your email address will not be published. Required fields are marked *