ಬಿಜೆಪಿ ವಿರುದ್ಧ ಭ್ರಷ್ಟಾಚಾರ ಆರೋಪದ ಜಾಹೀರಾತು: ದೂರು ವಿಚಾರಣೆಗೆ ಪರಿಗಣಿಸಿದ ವಿಶೇಷ ನ್ಯಾಯಾಲಯ
ಕಾಂಗ್ರೆಸ್ ಪಕ್ಷವು ಬಿಜೆಪಿ ವಿರುದ್ಧ ಭ್ರಷ್ಟಾಚಾರ ಆರೋಪದಡಿ ಪತ್ರಿಕೆಗಳಲ್ಲಿ ಜಾಹೀರಾತು ನೀಡಿತ್ತು. ಈ ಸಂಬಂಧಭಾರತೀಯ ಜನತಾ ಪಕ್ಷ ಸಲ್ಲಿಸಿದ್ದ ಖಾಸಗಿ ದೂರನ್ನು ವಿಚಾರಣೆ ನಡೆಸಿರುವ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ದೂರು ವಿಚಾರಣೆಗೆ ಯೋಗ್ಯವೆಂದು ಪರಿಗಣಿಸಿದೆ.
ಬೆಂಗಳೂರು: ಬಿಜೆಪಿ ಪಕ್ಷದ ವಿರುದ್ಧ ವಿವಿಧ ಭ್ರಷ್ಟಾಚಾರ ಆರೋಪ ಹೊರಿಸಿ ಪತ್ರಿಕೆಗಳಲ್ಲಿ ಜಾಹೀರಾತು ನೀಡಿದ್ದ ಕಾಂಗ್ರೆಸ್ ಪಕ್ಷ, ರಾಹುಲ್ ಗಾಂಧಿ, ಸಿದ್ದರಾಮಯ್ಯ ಹಾಗೂ ಡಿ ಕೆ ಶಿವಕುಮಾರ್ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ನಗರದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ವಿಚಾರಣೆಗೆ ಪರಿಗಣಿಸಿದೆ.
ಭಾರತೀಯ ಜನತಾ ಪಕ್ಷ ಸಲ್ಲಿಸಿದ್ದ ಖಾಸಗಿ ದೂರನ್ನು ವಿಚಾರಣೆ ನಡೆಸಿರುವ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಜೆ.ಪ್ರೀತ್ ಅವರು ದೂರು ವಿಚಾರಣೆಗೆ ಯೋಗ್ಯವೆಂದು ಪರಿಗಣಿಸಿದ್ದು, ಕಾಗ್ನಿಜೆನ್ಸ್ ಪಡೆದುಕೊಂಡಿದೆ. ಅಲ್ಲದೇ, ಪ್ರಕರಣ ಸಂಬಂಧ ದೂರುದಾರರು ಮತ್ತು ಸಾಕ್ಷಿಗಳ ಹೇಳಿಕೆಗಳನ್ನು ದಾಖಲಿಸುವುದಕ್ಕಾಗಿ ಜುಲೈ 27ಕ್ಕೆ ದಿನಾಂಕವನ್ನು ನಿಗದಿ ಪಡಿಸಿ ವಿಚಾರಣೆ ಮುಂದೂಡಿದೆ.
ಪ್ರಕರಣದ ಹಿನ್ನೆಲೆ ಏನು ?: ಬಿಜೆಪಿ ಪಕ್ಷದ ವಿರುದ್ಧ ಭ್ರಷ್ಟಾಚಾರ ರೇಟ್ ಕಾರ್ಡ್ ಎಂಬ ಶೀರ್ಷಿಕೆಯಡಿ ಪ್ರಮುಖ ದಿನ ಪತ್ರಿಕೆಗಳಲ್ಲಿ 2023 ರ ಮೇ 5 ರಂದು ಮಾನಹಾನಿಕರ ಜಾಹೀರಾತು ನೀಡಲಾಗಿತ್ತು. ಈ ಜಾಹೀರಾತಿನಲ್ಲಿ ಅಧಿಕಾರಿಗಳ ವರ್ಗಾವಣೆಗೆ ವಿವಿಧ ಹಂತದಲ್ಲಿ ಲಂಚವನ್ನು ಪಡೆದುಕೊಳ್ಳಲಾಗುತ್ತಿದೆ. ಎಂಜಿನಿಯರ್ಗಳಿಗೆ 5 ಕೋಟಿ, ಸಬ್ ರಿಜಿಸ್ಟ್ರಾರ್ಗೆ 5 ಕೋಟಿ, ಪಿಎಸ್ಐಗೆ 80 ಲಕ್ಷ ಎಂಬುದಾಗಿ ಪ್ರತಿಯೊಂದು ಹುದ್ದೆಯನ್ನು ಮಾರಾಟ ಮಾಡುತ್ತಿದ್ದಾರೆ ಎಂದು ಜಾಹೀರಾತಿನಲ್ಲಿ ತಿಳಿಸಿದ್ದರು. ಈ ಕುರಿತು ಬಿಜೆಪಿ ಪಕ್ಷವು ಮಾನನಷ್ಟಕ್ಕೆ ಕಾರಣವಾಗಿದೆ ಎಂದು ಆರೋಪಿಸಿ, ದೂರು ನೀಡಿದೆ.
ಅಲ್ಲದೇ, ಕೊರೋನಾ ಚಿಕಿತ್ಸೆಗೆ ಬೇಕಿರುವ ಪರಿಕರಗಳ ಖರೀದಿಗೆ ಶೇ.70 ರಷ್ಟು ಕಮಿಷನ್ ಪಡೆಯಲಾಗಿದೆ. ಲೋಕೋಪಯೋಗಿ ಗುತ್ತಿಗೆಗಳು, ಮಠಗಳಿಗೆ ಅನುದಾನ ನೀಡುವು ವಿಚಾರ, ಟೆಂಡರ್ ಪ್ರಕ್ರಿಯೆಗಳು, ಮೊಟ್ಟೆ ವಿತರಣೆಗಳಲ್ಲಿ ಶೇ. 30 ರಿಂದ 70 ರ ವರೆಗೂ ಕಮಿಷನ್ ಪಡೆಯಲಾಗಿದೆ ಎಂದು ತಿಳಿಸಲಾಗಿತ್ತು.
ಜೊತೆಗೆ, ಡಬಲ್ ಎಂಜಿನ್ ಸರ್ಕಾರಕ್ಕೆ ಬದಲಾಗಿ ಟ್ರಬಲ್ ಎಂಜಿನ್ ಸರ್ಕಾರ ಎಂಬ ಪದ ಬಳಸಲಾಗಿತ್ತು. ಆ ಮೂಲಕ ದೂರದಾರ ಪಕ್ಷದ ಖ್ಯಾತಿ ಮತ್ತು ಘನತೆಯನ್ನು ಕೆಡಿಸಿ ಚುನಾವಣೆಯಲ್ಲಿ ಅದರ ಅವಕಾಶ ಪಡೆಯುವುದಕ್ಕಾಗಿ ಪ್ರಯತ್ನಿಸಿದ್ದಾರೆ. ಈ ಜಾಹೀರಾತಿನಲ್ಲಿ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರ ಭಾವ ಚಿತ್ರಗಳನ್ನು ಅಳವಡಿಸಿದ್ದಾರೆ. ರಾಹುಲ್ ಗಾಂಧಿ ಅವರು ಅದೇ ಜಾಹೀರಾತನ್ನು ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ ಎಂದು ದೂರಿನಲ್ಲಿ ವಿವರಿಸಲಾಗಿದೆ. ಈ ಎಲ್ಲ ಆರೋಪಗಳನ್ನು ಹಿಂಪಡೆಯುವಂತೆ ಸೂಚಿಸಿ ಲೀಗಲ್ ನೋಟಿಸ್ ಜಾರಿ ಮಾಡಲಾಗಿತ್ತು. ಆದರೂ, ಆರೋಪಿಗಳು ತಾವು ನೀಡಿರುವ ಜಾಹೀರಾತನ್ನು ಹಿಂಪಡೆದುಕೊಂಡಿಲ್ಲ. ಹೀಗಾಗಿ, ಮಾನ ನಷ್ಟ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ದೂರಿನಲ್ಲಿ ವಿವರಿಸಲಾಗಿತ್ತು.