ರಾಷ್ಟ್ರೀಯ ಶಿಕ್ಷಣ ನೀತಿಯ ಕುರಿತು ಕೇಂದ್ರದ ವಿರುದ್ಧ ವಾಗ್ದಾಳಿ ಮುಂದುವರಿಸಿದ ತಮಿಳುನಾಡು ಸಿಎಂ ಎಂ.ಕೆ ಸ್ಟಾಲಿನ್, ಕೇಂದ್ರ ಸರ್ಕಾರವು ರಾಜ್ಯಕ್ಕೆ 10,000 ಕೋಟಿ ರೂ. ಹಣವನ್ನು ನೀಡಲು ಮುಂದಾದರೂ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ತರಲು ಒಪ್ಪುವುದಿಲ್ಲ ಎಂದು ಹೇಳಿದ್ದಾರೆ.
NEP ಗೆ ವಿರೋಧವು ಕೇವಲ ಹಿಂದಿ ಹೇರಿಕೆ ಪ್ರಯತ್ನದಿಂದ ಮಾತ್ರವಲ್ಲ. ವಿದ್ಯಾರ್ಥಿಗಳ ಭವಿಷ್ಯ ಮತ್ತು ಸಾಮಾಜಿಕ ನ್ಯಾಯ ವ್ಯವಸ್ಥೆಯ ಮೇಲೆ ಗಂಭೀರ ಪರಿಣಾಮಗಳನ್ನು ಬೀರುವ ಹಲವಾರು ಇತರ ಅಂಶಗಳಿಂದಲೂ ಈ ನೀತಿಗೆ ನಮ್ಮ ವಿರೋಧವಿದೆ ಎಂದು ಅವರು ಹೇಳಿದರು.
ವೈದ್ಯಕೀಯ ಕೋರ್ಸ್‌ಗಳಿಗೆ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (NEET)ಯಂತೆಯೇ ಕಲಾ ಮತ್ತು ವಿಜ್ಞಾನ ಕಾಲೇಜುಗಳ ಪ್ರವೇಶಕ್ಕೂ ಸ್ಕ್ರೀನಿಂಗ್ ಪರೀಕ್ಷೆಯನ್ನು ಪ್ರೋತ್ಸಾಹಿಸುವುದರ ಜೊತೆಗೆ, NEP ವಿದ್ಯಾರ್ಥಿಗಳು ತಮ್ಮ ಅಧ್ಯಯನವನ್ನು ಸ್ಥಗಿತಗೊಳಿಸಲು ಅವಕಾಶ ನೀಡುತ್ತದೆ.
“ನಾವು ಯಾವುದೇ ಭಾಷೆಯನ್ನು ವಿರೋಧಿಸುವುದಿಲ್ಲ. ಆದರೆ ಅದರ ಹೇರಿಕೆಯನ್ನು ವಿರೋಧಿಸುತ್ತೇವೆ. ಹಿಂದಿಯನ್ನು ಹೇರುವ ಪ್ರಯತ್ನಕ್ಕಾಗಿ ಮಾತ್ರ ನಾವು NEP ಅನ್ನು ವಿರೋಧಿಸುತ್ತಿಲ್ಲ, ಬದಲಾಗಿ ಹಲವಾರು ಇತರ ಕಾರಣಗಳಿಗಾಗಿಯೂ ಸಹ ನಾವು ಅದನ್ನು ವಿರೋಧಿಸುತ್ತಿದ್ದೇವೆ. ಇದು ವಿದ್ಯಾರ್ಥಿಗಳನ್ನು ಶಾಲೆಗಳಿಂದ ದೂರವಿಡುತ್ತದೆ” ಎಂದರು.
ಎಸ್‌ಸಿ/ಎಸ್‌ಟಿ ಮತ್ತು ಬಿಸಿ ವಿದ್ಯಾರ್ಥಿಗಳಿಗೆ ಈಗ ನೀಡಲಾಗುತ್ತಿರುವ ಆರ್ಥಿಕ ಸಹಾಯವನ್ನು ‘ನಿರಾಕರಿಸುವುದರ’ ಜೊತೆಗೆ, ಎನ್‌ಇಪಿ ಮೂರನೇ, ಐದನೇ ಮತ್ತು ಎಂಟನೇ ತರಗತಿಗಳಿಗೆ ಸಾರ್ವಜನಿಕ ಪರೀಕ್ಷೆಗಳನ್ನು ಈ ನೀತಿ ಪ್ರಸ್ತಾಪಿಸಿದೆ. ಕಲಾ ಮತ್ತು ವಿಜ್ಞಾನ ಕಾಲೇಜುಗಳಿಗೆ ಪ್ರವೇಶಕ್ಕಾಗಿ ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು ಪರಿಚಯಿಸಿದೆ ಎಂದು ಹೇಳಿದ್ದಾರೆ.
“ರಾಜ್ಯವು NEP ಅನ್ನು ಜಾರಿಗೆ ತಂದರೆ ತಮಿಳುನಾಡಿಗೆ 2,000 ಕೋಟಿ ರೂ. ಸಿಗುತ್ತದೆ ಎಂದು ಕೇಂದ್ರ ಸರ್ಕಾರ ಹೇಳುತ್ತಿದೆ. ಕೇಂದ್ರವು 10,000 ಕೋಟಿ ರೂ.ಗಳನ್ನು ನೀಡಿದರೂ ನಾವು NEPಗೆ ಒಪ್ಪುವುದಿಲ್ಲ. ನಾನು NEP ಗೆ ಅವಕಾಶ ನೀಡುವುದಿಲ್ಲ ಮತ್ತು ತಮಿಳುನಾಡನ್ನು 2,000 ವರ್ಷಗಳ ಕಾಲ ಹಿಂದಕ್ಕೆ ತಳ್ಳುವ ಪಾಪವನ್ನು ಮಾಡುವುದಿಲ್ಲ” ಎಂದು ಸ್ಟಾಲಿನ್ ಹೇಳಿದ್ದಾರೆ.
ಎನ್‌ಇಪಿಯ ತ್ರಿಭಾಷಾ ನೀತಿಯನ್ನು ಟೀಕಿಸಿದ ಸ್ಟಾಲಿನ್, ಕೇಂದ್ರ ಸರ್ಕಾರವು ತಮಿಳುನಾಡಿನ ಮೇಲೆ ಹಿಂದಿ ಹೇರಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು. ರಾಜ್ಯದ ಗುರುತನ್ನು ಅಥವಾ ತಮಿಳು ಭಾಷೆಯ ಪ್ರಾಮುಖ್ಯತೆಯನ್ನು ಹಾಳು ಮಾಡುವ ಯಾವುದೇ ಕ್ರಮವನ್ನು ತಮ್ಮ ಆಡಳಿತವು ಸಹಿಸುವುದಿಲ್ಲ ಎಂದಿದ್ದಾರೆ.
ಭಾಷಾ ನಿಧಿಯಲ್ಲಿನ ಅಸಮಾನತೆಗಳನ್ನು ಎತ್ತಿ ತೋರಿಸಿದ ಮುಖ್ಯಮಂತ್ರಿ ಸ್ಟಾಲಿನ್, ಸುಮಾರು 8 ಕೋಟಿ ಜನರು ತಮಿಳು ಮಾತನಾಡುತ್ತಿದ್ದರೂ ಕೇಂದ್ರ ಸರ್ಕಾರವು ಅದರ ಅಭಿವೃದ್ಧಿಗೆ ಕೇವಲ 74 ಕೋಟಿ ರೂ.ಗಳನ್ನು ಮಾತ್ರ ನಿಗದಿಪಡಿಸಿದೆ. ಕೆಲವೇ ಸಾವಿರ ಜನರು ಮಾತನಾಡುವ ಸಂಸ್ಕೃತಕ್ಕೆ 1,488 ಕೋಟಿ ರೂ.ಗಳ ಅನುದಾನ ಸಿಕ್ಕಿದೆ ಎಂದು ಟೀಕಿಸಿದ್ದಾರೆ.