ಚಂಡೀಗಢ : ಅಮೆರಿಕದಿಂದ ಗಡೀಪಾರು ಮಾಡಲಾದ 112 ಭಾರತೀಯರು ಇರುವ ಅಮೆರಿಕ ವಾಯುಪಡೆಯ ವಿಶೇಷ ವಿಮಾನ C17 ಗ್ಲೋಬ್‌ಮಾಸ್ಟರ್ III ಇಂದು ತಡರಾತ್ರಿ ಅಮೃತಸರ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯುವ ನಿರೀಕ್ಷೆಯಿದೆ.

ಅಮೆರಿಕದಿಂದ ಗಡಿಪಾರು ಮಾಡಲಾದ 112 ಜನರಲ್ಲಿ 31 ಮಂದಿ ಪಂಜಾಬ್‌ನವರು, 44 ಮಂದಿ ಹರಿಯಾಣದವರು, 33 ಮಂದಿ ಗುಜರಾತ್‌ನವರು, ಇಬ್ಬರು ಉತ್ತರ ಪ್ರದೇಶ ಮತ್ತು ಉತ್ತರಾಖಂಡದವರಿದ್ದಾರೆ ಎಂದು ಮೂಲಗಳು ತಿಳಿಸಿವೆ.

ನಿನ್ನೆ ತಡರಾತ್ರಿ ಪಂಜಾಬ್‌ನ 65 ಮಂದಿ ಸೇರಿದಂತೆ 117 ಅಕ್ರಮ ಭಾರತೀಯ ವಲಸಿಗರನ್ನು ಹೊತ್ತ ಅಮೆರಿಕ ಮಿಲಿಟರಿ ವಿಮಾನವು ರಾತ್ರಿ 11.30 ರ ಸುಮಾರಿಗೆ ಅಮೃತಸರ ವಿಮಾನ ನಿಲ್ದಾಣದಲ್ಲಿ ಇಳಿದಿದೆ.

ಫೆಬ್ರವರಿ 5 ರಂದು, ಅಮೆರಿಕದಿಂದ ಬಂದ ಮೊದಲ ವಿಮಾನ 104 ಗಡೀಪಾರು ಮಾಡಲ್ಪಟ್ಟವರೊಂದಿಗೆ ಅಮೃತಸರಕ್ಕೆ ತಲುಪಿತ್ತು. ಈ ಎರಡೂ ಸಂದರ್ಭಗಳಲ್ಲಿ, ಗಡಿಪಾರು ಮಾಡಿದವರ ಕೈಗಳಿಗೆ ಕೋಳ ಹಾಕಲಾಗಿತ್ತು ಮತ್ತು ಅವರ ಕಾಲುಗಳನ್ನು ಸರಪಳಿಯಿಂದ ಬಂಧಿಸಲಾಗಿತ್ತು.

ಅಕ್ರಮವಾಗಿ ದೇಶವನ್ನು ಪ್ರವೇಶಿಸಿದ ಅಥವಾ ವೀಸಾ ಅವಧಿ ಮೀರಿದ ನಂತರ ಅಲ್ಲಿಯೇ ಉಳಿದುಕೊಂಡ ವ್ಯಕ್ತಿಗಳ ಮೇಲೆ ಅಮೆರಿಕ ವಲಸೆ ಅಧಿಕಾರಿಗಳು ನಡೆಸುತ್ತಿರುವ ಕಾರ್ಯಾಚರಣೆಯ ಭಾಗ ಇದಾಗಿದೆ. ಪವಿತ್ರ ನಗರವಾದ ಅಮೃತಸರವನ್ನು “ಗಡಿಪಾರು ಕೇಂದ್ರ”ವನ್ನಾಗಿ ಮಾಡದಂತೆ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ನಿನ್ನೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿಕೊಂಡರು.

“ನಮ್ಮ ಪವಿತ್ರ ನಗರ (ಅಮೃತಸರ)ವನ್ನು ಗಡಿಪಾರು ಕೇಂದ್ರವನ್ನಾಗಿ ಮಾಡಬೇಡಿ” ಎಂದು ಮಾನ್ ಹೇಳಿದ್ದರು ಮತ್ತು ಪಂಜಾಬ್‌ನಿಂದ ಬಂದ ಗಡೀಪಾರು ಮಾಡಿದವರನ್ನು ಅವರ ಊರುಗಳಿಗೆ ಕರೆದೊಯ್ಯಲು ರಾಜ್ಯ ಸರ್ಕಾರ ಸಾರಿಗೆ ವ್ಯವಸ್ಥೆಗಳನ್ನು ಮಾಡಿದೆ ಎಂದು ಹೇಳಿದರು.

Leave a Reply

Your email address will not be published. Required fields are marked *