ರಾಯಚೂರು : ಜಿಲ್ಲೆಯಲ್ಲಿ ಮೈಕ್ರೋ ಫೈನಾನ್ಸ್ ಹಾವಳಿ ಒಂದೆಡೆಯಾದರೆ, ಇನ್ನೊಂದು ಕಡೆ ನಕಲಿ ಸಾಲ ರಿಕವರಿ ಟೀಂ ವಸೂಲಿ ದಂಧೆ ನಡೆಸಿರುವುದು ಬೆಳಕಿಗೆ ಬಂದಿದ್ದು, ಫೈನಾನ್ಸ್ ಸಾಲ ರಿಕವರಿ ಟೀಂ ಹೆಸರಲ್ಲಿ ಕಿರುಕುಳ ನೀಡುತ್ತಿದ್ದ ನಾಲ್ವರು ಆರೋಪಿಗಳನ್ನ ರಾಯಚೂರು ಗ್ರಾಮೀಣ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳನ್ನು ಫಯಾಜ್, ಶೇಖ್ ಎಂಡಿ ಆಯುಬ್, ಸೈಯದ್ ಶಹಬಾಜ್ ಅಹ್ಮದ್, ಅರೋನ್ ರಸೀದ್ ಎಂದು ಗುರುತಿಸಲಾಗಿದೆ. ಈ ತಂಡ ಮೊಬೈಲ್ ಆ್ಯಪ್‌ನಲ್ಲಿ ಫೈನಾನ್ಸ್‌ಗಳ ಸಾಲ ಬಾಕಿ ಇರುವವನ್ನು ಗುರುತಿಸಿ, ಟಾರ್ಗೆಟ್ ಮಾಡುತ್ತಿದ್ದರು. ರಸ್ತೆ ಮಧ್ಯದಲ್ಲೇ ಬೈಕ್, ವಾಹನಗಳನ್ನು ಅಡ್ಡಗಟ್ಟಿ ಸಾಲ ತೀರಿಸುವಂತೆ ಬೆದರಿಕೆ ಹಾಕುತ್ತಿದ್ದರು.
ಯಾದಗಿರಿ ಜಿಲ್ಲೆ ಗುಂಡ್ಲೂರಿನ ಸೈಯದ್ ಬಾಷಾ ಎಂಬುವವರ ಬುಲೇರೋ ವಾಹನವನ್ನು ನಗರದ ಹೊರವಲಯದ ಬೈಪಾಸ್ ರಸ್ತೆಯಲ್ಲಿ ಹಿಡಿದು 12 ಸಾವಿರ ರೂ. ಬೇಡಿಕೆ ಇಟ್ಟು ವಾಹನ ಜಪ್ತಿ ಮಾಡಿದ್ದರು. ಸಾಲ ಮಾಡಿದ್ದ ಫೈನಾನ್ಸ್ ಕಂಪನಿಯಲ್ಲಿ ಸೈಯದ್ ಬಾಷಾ ಕಂತು ಕಟ್ಟಿ ಬಂದಿದ್ದರೂ ವಾಹನ ಬಿಟ್ಟಿರಲಿಲ್ಲ. ಫೈನಾನ್ಸ್‌ನಲ್ಲಿ ಕಟ್ಟಿದರೆ ಸಾಲಲ್ಲ, ನಮಗೂ ಹಣ ಕೊಡಬೇಕು ಎಂದು ಒತ್ತಾಯಿಸಿದ್ದರು. ಇದರಿಂದ ಅನುಮಾನದ ಮೇಲೆ ಸೈಯದ್ ಬಾಷಾ ಸಹೋದರ ಅಜೀಜ್ ರಾಯಚೂರು ಗ್ರಾಮೀಣ ಠಾಣೆಯಲ್ಲಿ ಪ್ರಕರಣದ ದೂರು ದಾಖಲಿಸಿದ್ದರು.
ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಸುಮಾರು ವರ್ಷಗಳಿಂದ ಈ ನಕಲಿ ದಂಧೆಯಲ್ಲಿ ತೊಡಗಿರುವುದು ತನಿಖಾ ವಿಚಾರಣೆಯಲ್ಲಿ ತಿಳಿದು ಬಂದಿದೆ.