ಬೆಂಗಳೂರು : ಹಿಂದೂಸ್ತಾನ್ ಮೆಷಿನ್ ಟೂಲ್ಸ್ (ಎಚ್‌ಎಂಟಿ) ನ ಹಾಲಿ ಮತ್ತು ಮಾಜಿ ಉದ್ಯೋಗಿಗಳಿಗೆ ಬಾಕಿ ಇರುವ 361 ಕೋಟಿ ರೂ. ನಿವೃತ್ ವೇತನವನ್ನು ಪಾವತಿಸುವುದಾಗಿ ಕೇಂದ್ರ ಉಕ್ಕು ಮತ್ತು ಭಾರೀ ಕೈಗಾರಿಕೆಗಳ ಸಚಿವ ಹೆಚ್‌ಡಿ ಕುಮಾರಸ್ವಾಮಿ ಭರವಸೆ ನೀಡಿದರು.
ಬೆಂಗಳೂರಿನ ಎಚ್‍ಎಂಟಿ ಕಚೇರಿಯಲ್ಲಿ ಸಚಿವರನ್ನು ಭೇಟಿಯಾಗಿ ಉದ್ಯೋಗಿಗಳು ವೇತನ, ಗ್ರಾಚ್ಯುಟಿ, ಭವಿಷ್ಯ ನಿಧಿ ಪಾವತಿ ಸೇರಿದಂತೆ ಇನ್ನಿತರೆ ಸಮಸ್ಯೆಗಳ ಬಗ್ಗೆ ಗಮನ ಸೆಳೆದರು. ಉದ್ಯೋಗಿಗಳ ಮನವಿ ಆಲಿಸಿದ ನಂತರ ಮಾತನಾಡಿದ ಕುಮಾರಸ್ವಾಮಿ, ಉದ್ಯೋಗಿಗಳಿಗೆ ಬಾಕಿ ಇರುವ 361 ಕೋಟಿ ರೂ. ಮೊತ್ತ ಪಾವತಿಸುವ ಬಗ್ಗೆ ಮಾರ್ಗೋಪಾಯ ಹುಡುಕಲಾಗುವುದು. ಈ ಬಗ್ಗೆ ಸಚಿವಾಲಯದ ಉನ್ನತ ಅಧಿಕಾರಿಗಳ ಜತೆ ಚರ್ಚೆ ಮಾಡಲಾಗುವುದು ಎಂದು ಭರವಸೆ ನೀಡಿದರು.
ಪ್ರಧಾನಿಗಳ ನೇತೃತ್ವದಲ್ಲಿ ಸಂಕಷ್ಟದಲ್ಲಿರುವ ವಿವಿಧ ಕೈಗಾರಿಕೆಗಳಿಗೆ ಮರುಜೀವ ಕೊಡುವ ಪ್ರಯತ್ನ ನಡೆಯುತ್ತಿದೆ. ಅದರಲ್ಲಿ ವೈಜಾಗ್ ಸ್ಟೀಲ್, ಶಿವಮೊಗ್ಗ ಜಿಲ್ಲೆಯ ಭದ್ರಾವತಿಯ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಅದಿರು ಕಾರ್ಖಾನೆ, ಸೇಲಂ ಸ್ಟೀಲ್ ಇತ್ಯಾದಿ ಸೇರಿವೆ ಎಂದು ಕುಮಾರಸ್ವಾಮಿ ಉದ್ಯೋಗಿಗಳಿಗೆ ಧೈರ್ಯ ತುಂಬಿದರು.
ತಮ್ಮ ಮುಂದೆ ಎರಡು ಸವಾಲುಗಳಿವೆ ಎಂದು ಅವರು ಹೇಳಿದರು. “ಹೆಚ್‌ಎಂಟಿ ಪುನರುಜ್ಜೀವನಗೊಳಿಸುವುದು ದೊಡ್ಡ ಸವಾಲುಗಳಲ್ಲಿ ಒಂದಾಗಿದೆ. ನಿವೃತ್ತ ಉದ್ಯೋಗಿಗಳಿಗೆ ನೀಡಬೇಕಾದ ಆರ್ಥಿಕ ಪ್ರಯೋಜನಗಳನ್ನು ಅವರಿಗೆ ನೀಡುವುದು ಮತ್ತೊಂದು ಸವಾಲಾಗಿದೆ. ಸಮಸ್ಯೆಗಳನ್ನು ಪರಿಹರಿಸಲು ನಾನು ಪ್ರಾಮಾಣಿಕ ಪ್ರಯತ್ನಗಳನ್ನು ಮಾಡುತ್ತೇನೆ” ಎಂದರು.