ಬೆಳಗಾವಿ : ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಆತ್ಮಹತ್ಯೆ ಸರಣಿ ಹೆಚ್ಚಾಗಿ ಮುಂದುವರೆದಿದೆ. ಕಿರುಕುಳ ತಾಳಲಾರದೆ ಬಾವಿಗೆ ಹಾರಿ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಗಾವಿಯ ತಾಲೂಕಿನ ಯಮನಾಪುರ ಗ್ರಾಮದ ಹೊರ ವಲಯದಲ್ಲಿ ನಡೆದಿದೆ.
ಹುಕ್ಕೇರಿ ತಾಲೂಕಿನ ಶಿರೂರ ಗ್ರಾಮದ ಸರೋಜಾ ಕಿರಬಿ (52) ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಫೈನಾನ್ಸ್ನಲ್ಲಿ ಸಬ್ಸಿಡಿ ಎಂದು ಹೇಳಿ ಹೊಳೆಪ್ಪ ದಡ್ಡಿ 2.30 ಲಕ್ಷ ರೂ. ಕೊಡಿಸಿದ್ದ. ಕೊಡಿಸಿದ ಅರ್ಧದಷ್ಟು ಸಾಲ ತನಗೆ ಕೊಟ್ಟರೆ ತಾನೇ ಸಾಲ ಕಟ್ಟುವುದಾಗಿ ಹೇಳಿದ್ದ. ಆದರೆ ಆತನ ನಂಬಿ ಸಾಲ ಪಡೆದು ಅರ್ಧದಷ್ಟು ಹಣವನ್ನು ಸರೋಜಾ ಹೊಳೆಪ್ಪಗೆ ನೀಡಿದ್ದರು.
ಅರ್ಧ ಸಾಲ ಕಟ್ಟಿದ ಬಳಿಕ ಫೈನಾನ್ಸ್ನಿಂದ ಪೂರ್ತಿ ಸಾಲ ಕಟ್ಟಲು ಸೂಚನೆ ನೀಡಿದ್ದಾರೆ. ಈ ವೇಳೆ ತಾನೂ ಹಣ ಕಟ್ಟುವುದಿಲ್ಲ, ಸಬ್ಸಿಡಿಯಾಗಿ ಸಾಲ ಪಡೆದಿದ್ದೇನೆ ಎಂದು ಸರೋಜ ಹೇಳಿದ್ದಾರೆ. ತಾವು ಸಬ್ಸಿಡಿ ಸಾಲ ಕೊಟ್ಟಿಲ್ಲ ಪೂರ್ತಿ ಹಣ ಕಟ್ಟಿ ಎಂದು ಫೈನಾನ್ಸ್ ಸಿಬ್ಬಂದಿ ನಿತ್ಯ ಕಿರುಕುಳ ನೀಡಿದ್ದಾರೆ. ಈ ವೇಳೆ ಅರ್ಧ ಸಾಲ ಪಡೆದ ಹೊಳೆಪ್ಪ ಸಹ ಸಾಲ ಕಟ್ಟುವುದಿಲ್ಲವೆಂದು ಕೈ ಎತ್ತಿದ್ದಾನೆ.
ಈ ಎಲ್ಲಾ ಕಿರುಕುಳ ತಾಳಲಾರದೇ ಸರೋಜಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಕುರಿತು ಮಧ್ಯಸ್ಥಿಕೆ ವಹಿಸಿ ಸಾಲ ಕೊಡಿಸಿದ್ದ, ಹೊಳೆಪ್ಪನ ವಿರುದ್ಧ ಕಾಕತೀ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮರಣೋತ್ತರ ಪರೀಕ್ಷೆ ಬಳಿಕ ಕುಟುಂಬಸ್ಥರಿಗೆ ಶವ ಹಸ್ತಾಂತರ ಮಾಡಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.